Select Your Language

Notifications

webdunia
webdunia
webdunia
webdunia

ರುಚಿರುಚಿಯಾದ ತೊಕ್ಕುಗಳು...!!

ರುಚಿರುಚಿಯಾದ ತೊಕ್ಕುಗಳು...!!

ನಾಗಶ್ರೀ ಭಟ್

ಬೆಂಗಳೂರು , ಶುಕ್ರವಾರ, 22 ಡಿಸೆಂಬರ್ 2017 (15:00 IST)
ದಕ್ಷಿಣ ಭಾರತದಲ್ಲಿ ತೊಕ್ಕು ಬಹಳ ಜನಪ್ರಿಯವಾದ ಪದಾರ್ಥವಾಗಿದೆ ಮತ್ತು ಮಾಡುವುದೂ ಸುಲಭ. ಇದು ಅನ್ನ, ಚಪಾತಿ, ದೋಸೆ, ಇಡ್ಲಿ ಎಲ್ಲದರ ಜೊತೆಗೂ ರುಚಿಯಾಗಿರುತ್ತದೆ. ತೊಕ್ಕನ್ನು ಹಲವು ತರಕಾರಿಗಳಿಂದ ಮಾಡುತ್ತಾರೆ. ಉದಾ: ನೆಲ್ಲಿಕಾಯಿ, ಹುಣಸೆ ಕಾಯಿ, ಟೊಮೆಟೋ, ಮಾವಿನಕಾಯಿ ಇತ್ಯಾದಿ. ನಿಮಗೂ ಹೇಗೆ ಮಾಡುವುದೆಂದು ತಿಳಿದುಕೊಳ್ಳಬೇಕಾದರೆ ಈ ಲೇಖನವನ್ನು ಓದಿ.
 
1. ನೆಲ್ಲಿಕಾಯಿ ತೊಕ್ಕು:
ಬೇಕಾಗುವ ಸಾಮಗ್ರಿಗಳು:
ನೆಲ್ಲಿಕಾಯಿ - 1 1/2 ಕಪ್
ಒಣ ಮೆಣಸು - 8-10
ಮೆಣಸಿನಕಾಳು - 8-10
ಬೆಲ್ಲ - 2-3 ಚಮಚ
ಜೀರಿಗೆ - 1/2 ಚಮಚ
ಮೆಂತೆ - 1/2 ಚಮಚ
ಅರಿಶಿಣ - 1/2 ಚಮಚ
ಇಂಗು - 1/4 ಚಮಚ
ಉಪ್ಪು - ರುಚಿಗೆ
ಎಣ್ಣೆ - 2-4 ಚಮಚ
ಸಾಸಿವೆ - 1 ಚಮಚ
ಕರಿಬೇವು - ಸ್ವಲ್ಪ
 
ಮಾಡುವ ವಿಧಾನ:
 
* ನೆಲ್ಲಿಕಾಯಿಗಳನ್ನು ತೊಳೆದು ಚೆನ್ನಾಗಿ ಬೇಯಿಸಿಕೊಳ್ಳಿ. ಅದು ಸ್ವಲ್ಪ ತಣ್ಣಗಾದ ನಂತರ ಅದರ ಬೀಜವನ್ನು ಬೇರ್ಪಡಿಸಿ.
 
* ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಬಿಸಿಯಾದ ನಂತರ ಅದಕ್ಕೆ ಮೆಂತೆ, ಸಾಸಿವೆ, ಜೀರಿಗೆ, ಮೆಣಸಿನಕಾಳು ಮತ್ತು ಒಣ ಮೆಣಸನ್ನು ಹಾಕಿ ಚೆನ್ನಾಗಿ ಹುರಿದ ನಂತರ ಸ್ಟೌ ಆಫ್ ಮಾಡಿ.
 
* ಮೇಲೆ ಹುರಿದಿಟ್ಟುಕೊಂಡ ಸಾಂಬಾರು ಪದಾರ್ಥಗಳು, ಬೇಯಿಸಿದ ನೆಲ್ಲಿಕಾಯಿ, ಉಪ್ಪು ಮತ್ತು ಬೆಲ್ಲವನ್ನು ಸೇರಿಸಿ ಚೆನ್ನಾಗಿ ರುಬ್ಬಿ ಅದನ್ನು ಒಂದು ಬೌಲ್‌ನಲ್ಲಿ ತೆಗೆದಿಟ್ಟುಕೊಳ್ಳಿ.
 
* ಈಗ 2-3 ಚಮಚ ಎಣ್ಣೆ, ಸಾಸಿವೆ, 1 ಮೆಣಸು, ಕರಿಬೇವು, ಇಂಗು ಮತ್ತು ಅರಿಶಿಣವನ್ನು ಹಾಕಿ ಒಗ್ಗರಣೆಯನ್ನು ತಯಾರಿಸಿ ಅದಕ್ಕೆ ರುಬ್ಬಿಟ್ಟಿರುವ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ನೆಲ್ಲಿಕಾಯಿ ತೊಕ್ಕು ರೆಡಿ.
 
ಬಿಸಿ ಬಿಸಿಯಾದ ಅನ್ನಕ್ಕೆ ತುಪ್ಪ ಮತ್ತು ತೊಕ್ಕನ್ನು ಹಾಕಿಕೊಂಡು ತಿಂದರೆ ರುಚಿಯಾಗಿರುತ್ತದೆ.
 
2. ಮಾವಿನ ಕಾಯಿ ತೊಕ್ಕು:
webdunia
ಬೇಕಾಗುವ ಸಾಮಗ್ರಿಗಳು:
(ಹುಳಿ)ಮಾವಿನ ಕಾಯಿ - 2 
ಅರಿಶಿಣ - 1 ಚಮಚ
ಉಪ್ಪು- ರುಚಿಗೆ
ಒಣ ಮೆಣಸು - 8-10(ರುಚಿಗೆ ತಕ್ಕಂತೆ)
ಅಚ್ಚಖಾರದ ಪುಡಿ - 2 ಚಮಚ
ಸಾಸಿವೆ - 2 ಚಮಚ
ಮೆಂತೆ - 1 ಚಮಚ
ಬೆಳ್ಳುಳ್ಳಿ - 5-6 ಎಸಳು
ಇಂಗು - 1/4 ಚಮಚ
ಕರಿಬೇವು - ಸ್ಪಲ್ಪ
ಎಣ್ಣೆ - 4-5 ಚಮಚ
 
ಮಾಡುವ ವಿಧಾನ:
 
* ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ತುರಿದಿಟ್ಟುಕೊಳ್ಳಿ.
 
* ಒಂದು ಬಾಣಲೆಯನ್ನು ತೆಗೆದುಕೊಂಡು 3-4 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಸಾಸಿವೆ, ಕರಿಬೇವು ಮತ್ತು ಇಂಗನ್ನು ಹಾಕಿ. ಸಾಸಿವೆ ಸಿಡಿಯಲು ಆರಂಭವಾದಾಗ ಅದಕ್ಕೆ ತುರಿದಿಟ್ಟ ಮಾವಿನಕಾಯಿ ತುರಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ.
 
* 2-3 ನಿಮಿಷದ ನಂತರ ಸ್ವಲ್ಪ ಬೆಂದಿರುವ ಮಾವಿನಕಾಯಿ ತುರಿಗೆ ಉಪ್ಪು ಮತ್ತು ಅರಿಶಿಣವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಟೌ ಉರಿಯನ್ನು ಕಡಿಮೆ ಮಾಡಿ 4-5 ನಿಮಿಷ ಬೇಯಲು ಬಿಡಿ.
 
* ಒಂದು ಬಾಣಲೆಗೆ 1 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ 1/2 ಚಮಚ ಸಾಸಿವೆ, ಮೆಂತೆ, ಬೆಳ್ಳುಳ್ಳಿ, 1/4 ಇಂಗು ಮತ್ತು ಒಣ ಮೆಣಸನ್ನು ಹಾಕಿ ಹುರಿದು ಅದು ತಣ್ಣಗಾದ ನಂತರ ಮಿಕ್ಸಿ ಜಾರ್‌ಗೆ ಹಾಕಿ ಚೆನ್ನಾಗಿ ರುಬ್ಬಿ ಮಸಾಲಾ ಪುಡಿಯನ್ನು ರೆಡಿ ಮಾಡಿ.
 
* ಸ್ಟೌ ಮೇಲಿರುವ ಮಾವಿನಕಾಯಿ ತುರಿ ಬೆಂದು ಮೆದುವಾದ ನಂತರ ಅದಕ್ಕೆ ಮಸಾಲಾ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಅಗತ್ಯವೆನಿಸಿದರೆ ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವನ ಒಗ್ಗರಣೆಯನ್ನು ಹಾಕಿಕೊಂಡರೆ ಮಾವಿನಕಾಯಿ ತೊಕ್ಕು ರೆಡಿ.
 
ಇದೇ ರೀತಿಯಲ್ಲಿ ಟೊಮೆಟೋ, ಹುಣಸೆ ಕಾಯಿಯನ್ನು ಬಳಸಿ ತೊಕ್ಕನ್ನು ಮಾಡಬಹುದು. ತೊಕ್ಕನ್ನು ನಾವು 7-8 ದಿನಗಳವರೆಗೆ ಕೆಡದಂತೆ ಇಡಬಹುದು. ಫ್ರಿಡ್ಜ್‌ನಲ್ಲಿ ಇಟ್ಟರೆ ಸುಮಾರು ಒಂದು ತಿಂಗಳು ಕೆಡದಂತೆ ಇರುತ್ತದೆ. ಇದು ಚಪಾತಿ, ಅನ್ನ, ದೋಸೆ, ಇಡ್ಲಿ, ಬ್ರೆಡ್ ಮತ್ತು ರೊಟ್ಟಿಯ ಜೊತೆ ಚೆನ್ನಾಗಿರುತ್ತದೆ. ನೀವೂ ಒಮ್ಮೆ ಮಾಡಿ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಒಮ್ಮೆ ಸೊಪ್ಪಿನ ಪಲ್ಯ ಮಾಡಿ ನೋಡಿ...