Select Your Language

Notifications

webdunia
webdunia
webdunia
webdunia

ಒಮ್ಮೆ ಸೊಪ್ಪಿನ ಪಲ್ಯ ಮಾಡಿ ನೋಡಿ...

ಒಮ್ಮೆ ಸೊಪ್ಪಿನ ಪಲ್ಯ ಮಾಡಿ ನೋಡಿ...

ನಾಗಶ್ರೀ ಭಟ್

ಬೆಂಗಳೂರು , ಶುಕ್ರವಾರ, 22 ಡಿಸೆಂಬರ್ 2017 (14:55 IST)
ಇತ್ತೀಚಿನ ದಿನಗಳಲ್ಲಿ ಅಡುಗೆಯಲ್ಲಿ ಸೊಪ್ಪನ್ನು ಬಳಸುವುದು ತುಂಬಾ ಅಪರೂಪವಾಗಿದೆ. ದೇಹಕ್ಕೆ ಅಗತ್ಯವಿರುವ ಹೆಚ್ಚಿನ ಪೌಷ್ಠಿಕಾಂಶಗಳು, ಕಬ್ಬಿಣಾಂಶಗಳು ಹೆಚ್ಚಾಗಿ ಇರುವುದು ಸೊಪ್ಪಲ್ಲೇ. ಪಾಲಾಕ್, ಬಸಳೆ, ಹರಿಗೆ, ಮೆಂತೆ ಹೀಗೆ ಅನೇಕ ಬಗೆಯ ಸೊಪ್ಪುಗಳಿವೆ. ಇವೆಲ್ಲಾ ನಮ್ಮ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದಾಗಿದೆ. ಈ ಸೊಪ್ಪುಗಳನ್ನು ಬಳಸಿ ರುಚಿಯಾದ ಪಲ್ಯವನ್ನು ಮಾಡುವುದು ಹೇಗೆ ಎಂದು ತಿಳಿಯುವ ಕುತೂಹಲವಿದ್ದರೆ ಈ ಲೇಖನವನ್ನು ಓದಿ.
ಬೇಕಾಗುವ ಸಾಮಗ್ರಿಗಳು:
 
ಮೆಂತೆ ಸೊಪ್ಪು - 1/2 ಕಟ್ಟು
ಪಾಲಾಕ್ ಸೊಪ್ಪು/ಬಸಳೆ ಸೊಪ್ಪು - 1/2 ಕಟ್ಟು
ಹೆಸರು ಕಾಳು - 1 ಕಪ್ (ಮೊಳಕೆಬರಿಸಿರುವುದು)
ಹಸಿ ಮೆಣಸು - 2-3
ಈರುಳ್ಳಿ - 1
ಬೆಳ್ಳುಳ್ಳಿ - 5-6 ಎಸಳು
ಕಾಯಿತುರಿ - 1/4 ಕಪ್
ಅರಿಶಿಣ - 1/2 ಚಮಚ
ಅಚ್ಚಖಾರದ ಪುಡಿ - 1/2 ಚಮಚ
ಹುಣಸೆ ಹಣ್ಣಿನ ರಸ - 2 ಚಮಚ
ಬೆಲ್ಲ - 1 ಚಮಚ
ಒಣ ಮೆಣಸು - 1-2
ಸಾಸಿವೆ - 1/2 ಚಮಚ
ಇಂಗು - 1/4 ಚಮಚ
ಉದ್ದಿನ ಬೇಳೆ - 1 ಚಮಚ
ಕರಿಬೇವು - ಸ್ವಲ್ಪ
ಎಣ್ಣೆ - 4-5 ಚಮಚ
ಉಪ್ಪು - ರುಚಿಗೆ
 
ಮಾಡುವ ವಿಧಾನ:
 
* ಒಂದು ಕುಕ್ಕರ್‌ನಲ್ಲಿ ಮೊಳಕೆ ಬರಿಸಿದ ಹೆಸರು ಕಾಳು, ನೀರು ಮತ್ತು ಸ್ವಲ್ಪ ಉಪ್ಪನ್ನು ಹಾಕಿ 1 ಸೀಟಿ ಹಾಕಿಸಿ. ಸ್ವಲ್ಪ ಸಮಯದ ನಂತರ ಕುಕ್ಕರ್ ಅನ್ನು ತೆರೆದು ಮೊಳಕೆಕಾಳಿನಿಂದ ನೀರನ್ನು ಬೇರ್ಪಡಿಸಿ.
 
* ಈರುಳ್ಳಿ, ಹಸಿಮೆಣಸು ಮತ್ತು ಸೊಪ್ಪುಗಳನ್ನು ಬೇರೆಯಾಗಿ ಹೆಚ್ಚಿಟ್ಟುಕೊಳ್ಳಿ.
 
* ಒಂದು ಬಾಣಲೆಯಲ್ಲಿ 4-5 ಚಮಚ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಅದಕ್ಕೆ ಉದ್ದಿನ ಬೇಳೆ, ಸಾಸಿವೆ, ಹೆಚ್ಚಿದ ಈರುಳ್ಳಿ, ಹೆಚ್ಚಿದ ಹಸಿ ಮೆಣಸು, ಬೆಳ್ಳುಳ್ಳಿ, ಅರಿಶಿಣ, ಇಂಗು ಕರಿಬೇವನ್ನು ಕ್ರಮವಾಗಿ ಹಾಕಿ ಒಗ್ಗರಣೆಯನ್ನು ತಯಾರಿಸಿಕೊಳ್ಳಿ. ಕೊನೆಯಲ್ಲಿ ಅಚ್ಚಖಾರದ ಪುಡಿಯನ್ನು ಸೇರಿಸಿ.
 
* ಅದಕ್ಕೆ ಹೆಚ್ಚಿದ ಸೊಪ್ಪನ್ನು ಹಾಕಿ 1-2 ನಿಮಿಷ ಚೆನ್ನಾಗಿ ಹುರಿಯಿರಿ. ನಂತರ ಹುಣಿಸೆ ಹಣ್ಣಿನ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಬೆಲ್ಲ, ಬೇಯಿಸಿದ ಮೊಳಕೆ ಕಾಳು ಮತ್ತು ಸ್ವಲ್ಪವೇ ನೀರನ್ನು ಹಾಕಿ ಚೆನ್ನಾಗಿ ಬೇಯಿಸಿದರೆ ಸೊಪ್ಪಿನ ರುಚಿ ರುಚಿಯಾದ ಪಲ್ಯ ರೆಡಿ.
 
ಸೊಪ್ಪಿನ ಪಲ್ಯ ಕೇವಲ ಅನ್ನದ ಜೊತೆಗಲ್ಲದೇ ಚಪಾತಿ, ಅಕ್ಕಿ ರೊಟ್ಟಿ, ದೋಸೆಯೊಂದಿಗೂ ರುಚಿಯಾಗಿರುತ್ತದೆ. ಆರೋಗ್ಯಕರವಾದ, ರುಚಿಯಾದ ಪಲ್ಯವನ್ನು ನೀವೂ ಒಮ್ಮೆ ಮಾಡಿ ಸವಿಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪುರುಷರೇ ಹುಷಾರ್! ಟಿವಿ ನೋಡುತ್ತಿದ್ದರೆ ವೀರ್ಯ ಕಳೆದುಕೊಳ್ಳುತ್ತೀರಿ!