Publish Date: Tue, 14 Nov 2023 (10:38 IST)
Updated Date: Tue, 14 Nov 2023 (10:41 IST)
ಮಹಾರಾಷ್ಟ್ರ ಮೂಲದ ಆರೋಪಿ ಗೋವಾದ ಮಹಿಳೆಯನ್ನು ಮದುವೆಯಾಗಿದ್ದ. ಆತ ನಿರುದ್ಯೋಗಿಯಾಗಿದ್ದು ಪತ್ನಿಯ ಗಳಿಕೆಯಲ್ಲಿಯೇ ಜೀವನ ನಡೆಸುತ್ತಿದ್ದ. ಒಂದು ವರ್ಷದ ಹಿಂದೆ ತನ್ನ ಹೆಂಡತಿ, ಮಗ ಮತ್ತು ಮಗಳ ಜತೆ ಉತ್ತರ ಗೋವಾದಲ್ಲಿರುವ ನಾದಿನಿಯ ಮನೆಗೆ ಹೋಗಿ ವಾಸಿಸತೊಡಗಿದನಾತ. ಆತನ ನಾದಿನಿ ತನ್ನ ಪುಟ್ಟ ಮಗಳು ಮತ್ತು ತಾಯಿಯ ಜತೆ ವಾಸವಾಗಿದ್ದಳು. ನಂತರ ಎಲ್ಲರ ಮೇಲೂ ಅತ್ಯಾಚಾರವೆಸಗಿ ಕಾಮುಕತನವನ್ನು ಮೆರೆದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ
ತನ್ನ ಪತ್ನಿಯ ತಾಯಿ, ನಾದಿನಿ ಮತ್ತು ಅಪ್ರಾಪ್ತ ಮಗಳ ಮೇಲೂ 6 ತಿಂಗಳಿಂದ ಸತತವಾಗಿ ಅತ್ಯಾಚಾರ ಮಾಡುತ್ತಿದ್ದ 30 ವರ್ಷದ ವ್ಯಕ್ತಿಯೊಬ್ಬನನ್ನು ಪೋಲಿಸರು ಬಂಧಿಸಿದ್ದು ಘಟನೆ ಪಣಜಿಯಲ್ಲಿ ವರದಿಯಾಗಿದೆ.
ಆತನ ಅತ್ತೆ (65)ಸಂಸಾರವನ್ನು ನಡೆಸಲು ಹೂವುಗಳನ್ನು ಮಾರಾಟ ಮಾಡುತ್ತಿದ್ದು, ಕೆಳ ತಿಂಗಳ ಹಿಂದೆ ಒಂದು ದಿನ ಆಕೆ ಹೂ ಮಾರುವ ಸ್ಥಳಕ್ಕೆ ಹೋದ ಆತ ಮನೆಗೆ ಹೋಗೋಣ ಎಂದು ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಉತ್ತರ ಗೋವಾದ ಗಡಿಯ ಕಾಡುಪ್ರದೇಶಕ್ಕೆ ಕೊಂಡೊಯ್ದು ಅತ್ಯಾಚಾರ ಎಸಗಿದ್ದಾನೆ. ಬೇರೆ ದಾರಿ ಕಾಣದೇ ಆಕೆ ಆತನೊಂದಿಗೆ ಮನೆಗೆ ಹಿಂತಿರುಗಿದ್ದಾಳೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.
ಆ ದಿನ ರಾತ್ರಿ ಮತ್ತೆ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆತ , ಹಲವು ಬಾರಿ ತನ್ನ ಕುಕೃತ್ಯವನ್ನು ಪುನರಾವರ್ತಿಸಿದ. ತನ್ನ ಮಗಳ ವೈವಾಹಿಕ ಬದುಕಿಗೆ ಮುಳ್ಳಾಗಬಾರದೆಂದು ಆಕೆ ಎಲ್ಲವನ್ನು ಸಹಿಸಿಕೊಂಡು ಸುಮ್ಮನಾದಳು.
ಅಷ್ಟಕ್ಕೆ ಸುಮ್ಮನಾಗದ ಆತ ತನ್ನ ನಾದಿನಿ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಆಕೆಯ ಮೇಲೂ ಅತ್ಯಾಚಾರ ಎಸಗಿದ. ಸಹಾಯಕ್ಕಾಗಿ ಆಕೆ ಕೂಗಿಕೊಂಡರೂ ನೆರೆಮನೆಯವರು ಆಕೆಯ ಸಹಾಯಕ್ಕೆ ಬರಲಿಲ್ಲ. ಭಾವ ತನ್ನ ಮೇಲೆ ಅತ್ಯಾಚಾರ ಎಸಗುತ್ತಿರುವ ವಿಷಯವನ್ನು ತಾಯಿಯ ಬಳಿ ಆಕೆ ಹೇಳಿಕೊಂಡಲಾದರೂ ತಾಯಿ ಮೌನವಹಿಸಿದಳು.
ಕಳೆದ ವಾರ ಆತ ತನ್ನ ಪತ್ನಿ, ನಾದಿನಿ, ಅತ್ತಿಗೆಯ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದಾಗ ಆತನ ಕುಕೃತ್ಯ ಬೆಳಕಿಗೆ ಬಂದಿದೆ. ಗಂಡನ ಕೀಚಕತನದ ಕುರಿತು ಕೇಳಿ ದಂಗಾದ ಪತ್ನಿ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಆರೋಪಿಯನ್ನು ಬಂಧಿಸಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ಆತ ತನ್ನ ಮಗಳ ಜತೆಯೂ ಹಾಸಿಗೆಯಲ್ಲಿ ನಗ್ನನಾಗಿದ್ದುದನ್ನು ನೋಡಿರುವುದಾಗಿ ಪರಿವಾರದ ಸದಸ್ಯರು ಹೇಳಿದ್ದಾರೆ.