ಲಕ್ನೋ (ಉತ್ತರ ಪ್ರದೇಶ): ಯೋಗಿ ಆದಿತ್ಯನಾಥ ಸರ್ಕಾರವು ದ್ವಿಚಕ್ರ ವಾಹನ ಸವಾರರಿಗೆ ಶಾಕ್ ನೀಡಿದೆ. ಇನ್ನು ಮುಂದೆ ಹೆಲ್ಮೆಟ್ ಹಾಕದೆ ಸವಾರಿ ಮಾಡಿದರೆ ಅವರ ವಾಹನಕ್ಕೆ ಇಂಧನ ಸಿಗುವುದಿಲ್ಲ.
ರಾಜ್ಯ ಸರ್ಕಾರದ ನಿರ್ದೇಶನದಂತೆ ನೋ ಹೆಲ್ಮೆಟ್– ನೋ ಇಂಧನ ಎಂಬ ರಾಜ್ಯಾದ್ಯಂತ ರಸ್ತೆ ಸುರಕ್ಷತಾ ಅಭಿಯಾನ ಸೆಪ್ಟೆಂಬರ್ 1 ರಿಂದ 30 ರವರೆಗೆ ಹಮ್ಮಿಕೊಳ್ಳಲಾಗಿದೆ.
ಅದರ ಅನ್ವಯ ರಾಜ್ಯದಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ ಅವರಿಗೆ ಪೆಟ್ರೋಲ್ ಸಿಗುವುದಿಲ್ಲ. ಸವಾರರು ಹೆಲ್ಮೆಟ್ ಧರಿಸಿದಾಗ ಮಾತ್ರ ಇಂಧನ ಸಿಗುತ್ತದೆ.
ಮೋಟಾರು ವಾಹನ ಕಾಯ್ದೆಯಡಿ ಹೆಲ್ಮೆಟ್ ನಿಯಮಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸ್, ಸಾರಿಗೆ, ಕಂದಾಯ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಜಂಟಿಯಾಗಿ ಕೆಲಸ ಮಾಡುತ್ತಾರೆ.
ಜಾರಿ ಏಜೆನ್ಸಿಗಳೊಂದಿಗೆ ಸಂಪೂರ್ಣ ಸಹಕಾರವನ್ನು ನೀಡುವಂತೆ ಯೋಗಿ ಸರ್ಕಾರವು ಸಾರ್ವಜನಿಕರಿಗೆ ಮನವಿ ಮಾಡಿದೆ.
ಈ ಅಭಿಯಾನವು ಕಾನೂನುಬದ್ಧವಾಗಿದೆ. ಸಾರ್ವಜನಿಕ ಹಿತಾಸಕ್ತಿಗಾಗಿ ಅದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಮೋಟಾರು ವಾಹನಗಳ ಕಾಯಿದೆ, 1988 ರ ಸೆಕ್ಷನ್ 129, ದ್ವಿಚಕ್ರ ವಾಹನ ಸವಾರರು ಮತ್ತು ಪಿಲಿಯನ್ ಪ್ರಯಾಣಿಕರಿಗೆ ಹೆಲ್ಮೆಟ್ ಅನ್ನು ಕಡ್ಡಾಯಗೊಳಿಸುತ್ತದೆ, ಆದರೆ, ಸೆಕ್ಷನ್ 194ಡಿ ಉಲ್ಲಂಘನೆಗಳಿಗೆ ದಂಡವನ್ನು ಸೂಚಿಸುತ್ತದೆ. ಸುಪ್ರೀಂ ಕೋರ್ಟ್‌ನ ರಸ್ತೆ ಸುರಕ್ಷತಾ ಸಮಿತಿಯು ಹೆಲ್ಮೆಟ್ ಅನುಸರಣೆಗೆ ಆದ್ಯತೆ ನೀಡುವಂತೆ ರಾಜ್ಯಗಳಿಗೆ ಸಲಹೆ ನೀಡಿದೆ.
ಯೋಗಿ ಸರ್ಕಾರವು ನೋ ಹೆಲ್ಮೆಟ್, ನೋ ಇಂಧನ ಉದ್ದೇಶವು ಶಿಕ್ಷಿಸುವುದಲ್ಲ, ಆದರೆ ಕಾನೂನಿನ ಪ್ರಕಾರ ಸುರಕ್ಷಿತ ನಡವಳಿಕೆಯನ್ನು ಅಳವಡಿಸಿಕೊಳ್ಳಲು ನಾಗರಿಕರನ್ನು ಪ್ರೋತ್ಸಾಹಿಸುವುದು ಎಂದು ಹೇಳಿದೆ.