ತಿರುವನಂತಪುರ: ಯೋಜನೆಯಂತೆ ಜಾಗತಿಕ ಅಯ್ಯಪ್ಪ ಸಂಗಮ ಕಾರ್ಯಕ್ರಮ ನಡೆಯಲಿದ್ದು, ಬೆದರಿಕೆಯೊಡ್ಡುವ ಮೂಲಕ ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಬಿಜೆಪಿಗೆ ತಿರುಗೇಟು ನೀಡಿದರು.
ಹಿಂದೂಗಳನ್ನು ಅವಮಾನಿಸಿದ್ದಕ್ಕಾಗಿ ಕೇರಳ ಸಿಎಂ ಹಾಗೂ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಕ್ಷಮೆಯಾಚಿಸದ್ದಲ್ಲಿ ಅಯ್ಯಪ್ಪ ಭಕ್ತರ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ತಡೆಯುವುದಾಗಿ ಬಿಜೆಪಿ ಕೇರಳ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.
ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿದ್ದರ ವಿರುದ್ಧ ದಾಖಲಿಸಿದ್ದ ಪ್ರಕರಣರನ್ನು ರದ್ದುಗೊಳಿಸುವಂತೆಯೂ ಚಂದ್ರಶೇಖರ್ ಒತ್ತಾಯಿಸಿದ್ದರು.
ಈ ಸಂಬಂಧ ಕೇರಳ ಸಿಎಂ ಪಿಣರಾಯಿ ಪ್ರತಿಕ್ರಿಯಿಸಿ, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತನ್ನ 75ನೇ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ರಾಜ್ಯ ಸರ್ಕಾರವು ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.
'ಇದು ಸರ್ಕಾರಿ ಕಾರ್ಯಕ್ರಮವಲ್ಲ. ಆದ್ದರಿಂದ ಕಾರ್ಯಕ್ರಮ ಸುಗಮವಾಗಿ ನಡೆಯಲಿ. ಅಲ್ಲದೆ ಕಾರ್ಯಕ್ರಮಕ್ಕೆ ಯಾರೂ ಸಹ ಬೆದರಿಕೆ ಹಾಕುವ ಅಗತ್ಯವಿಲ್ಲ. ಈ ಕಾರ್ಯಕ್ರಮವನ್ನು ತಡೆಯಲು ಸಾಧ್ಯವಿಲ್ಲ' ಎಂದಿದ್ದಾರೆ.