ಮೈಸೂರು: ಕನ್ನಡವನ್ನು ಭುವನೇಶ್ವರಿ ಆಗಿ ಒಪ್ಪದ ಸಾಹಿತಿ ಬಾನು ಮುಷ್ತಾಕ್ ಅವರು ನಾಡದೇವಿ ರೂಪದಲ್ಲಿನ ಚಾಮುಂಡಿಯನ್ನು ಒಪ್ಪುತ್ತಾರಾ? ಎಂದು ಮಾಜಿ ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ.
ನಮ್ಮ ಆಚಾರ, ವಿಚಾರ ಹಾಗೂ ಸಂಸ್ಕೃತಿಯನ್ನು ಒಡೆದು ಹಾಕಲು ಘಜ್ನಿ, ಮೊಗಲರು ಯತ್ನಿಸಿದರು. ಇದೇ ರೀತಿ ನಮ್ಮ ನಂಬಿಕೆಯನ್ನು ಸಾಹಿತಿ ಬಾನು ಮುಷ್ತಾಕ್ ಒಡೆಯುತ್ತಿದ್ದಾರೆ ಎಂದು ಪ್ರತಾಪಸಿಂಹ ಟೀಕಿಸಿದರು.
ಜನ ಸಾಹಿತ್ಯ ಭಾಷಣದಲ್ಲಿ ಬಾನು ಮುಷ್ತಾಕ್ ಭಾಷಣ ಏನಿತ್ತು? ಮುಸ್ಲಿಮರು ಕನ್ನಡ ಕಲಿಯಲು ಭುವನೇಶ್ವರಿ ತಾಯಿಯ ಮೂರ್ತಿ ಅಡ್ಡಿಯಾಯಿತು ಎಂದು ಅವರು ಹೇಳಿದ್ದಾರೆ. ಭುವನೇಶ್ವರಿಗೆ ಅರಿಸಿನ-ಕುಂಕುಮ ಇಟ್ಟಿದ್ದರಿಂದ ಮುಸ್ಲಿಮರು ಕನ್ನಡ ಕಲಿಯಲು ಆಗಿಲ್ಲ ಎಂದು ಹೇಳಿದ್ದು ಸತ್ಯ ತಾನೇ? ಎಂದು ಕೇಳಿದರು.
ಬಾನು ಅವರೇ ನೀವು ನಂಬಿರುವ ನಿಮ್ಮ ಅಲ್ಲಾ ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳುವುದಿಲ್ಲ. ನಮ್ಮ ದೇವರು ಹೇಗೆ ಕರೆಸಿಕೊಳ್ಳುತ್ತಾರೆ? ತಮಿಳುನಾಡಿನಲ್ಲಿ ಮುಸ್ಲಿಮರಿಗೆ ಮಾತೃ ಭಾಷೆ ತಮಿಳು. ಕರ್ನಾಟಕದಲ್ಲೇಕೆ ಮುಸ್ಲಿಮರ ಮಾತೃ ಭಾಷೆ ಕನ್ನಡ ಆಗುವುದಿಲ್ಲ ಎಂದು ಕೇಳಿದರು.
ಬಾನು ಮುಷ್ತಾಕ್ ಮುಸ್ಲಿಂ ಅನ್ನುವ ಕಾರಣಕ್ಕೆ ನಾನು ವಿರೋಧಿಸುತ್ತಿಲ್ಲ. ಮುಸ್ಲಿಮರ ಬಗ್ಗೆಯೂ ನಮಗೇನೂ ಕೆಟ್ಟ ಭಾವನೆಗಳಿಲ್ಲ. ಟಿಪ್ಪು ಜಯಂತಿ ಮಾಡಿ ಎಂದು ಮುಸ್ಲಿಮರು ಕೇಳಿರಲಿಲ್ಲ. ಸಿದ್ದರಾಮಯ್ಯ ಮುಸ್ಲಿಮರ ಓಲೈಕೆಗಾಗಿ ಟಿಪ್ಪು ಜಯಂತಿ ಮಾಡಿದರು. ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಕರೆಯಿರಿ ಎಂದು ಯಾವ ಮುಸ್ಲಿಮರೂ ಕೇಳಿರಲಿಲ್ಲ. ಅದರೂ ಸಿದ್ದರಾಮಯ್ಯ ಮಾಡಿದರು ಎಂದು ಟೀಕಿಸಿದರು.