ಬೆಳಗಾವಿ: ಮಾಜಿ ಸಚಿವ ರಾಜಣ್ಣ ಅವರ ಹೇಳಿಕೆ ಮಾತ್ರವಲ್ಲ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದನದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ್ದೂ ಕೂಡ ಕಾಂಗ್ರೆಸ್ ಹೈಕಮಾಂಡ್ ತಲುಪಲಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕೌಂಟರ್ ನೀಡಿದ್ದಾರೆ.
ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಉತ್ತರಿಸಬೇಕು. ಇದಕ್ಕೆ ನಾನು ಏನೂ ಹೇಳಲು ಆಗಲ್ಲ ಎಂದರು.
ಡಿಕೆಶಿ ಆರ್‌ಎಸ್‌ಎಸ್ ಗೀತೆ ಹಾಡಿದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಹೈಕಮಾಂಡ್ ಚರ್ಚೆ ಮಾಡಬೇಕು. ಇದು ನಮ್ಮ ಮಟ್ಟದಲ್ಲಿ ಚರ್ಚೆ ಮಾಡಲು ಆಗುವುದಿಲ್ಲ. ರಾಜ್ಯದಲ್ಲಿ ಏನು ನಡೆಯುತ್ತದೆ ಎಂದು ಹೈಕಮಾಂಡ್ ಗಮನಕ್ಕೆ ಬರಲ್ಲ. ಕೆಲವು ವಿಷಯ ಮಾತ್ರ ರಾಹುಲ್ ಗಾಂಧಿ ಅವರಿಗೆ ತಲುಪುತ್ತವೆ, ಮತ್ತೆ ಕೆಲವು ತಲುಪುವುದೇ ಇಲ್ಲ. ಎಲ್ಲ ವಿಷಯಗಳನ್ನೂ ಮುಟ್ಟಿಸುವ ಕೆಲಸವನ್ನು ನಾಯಕರು ಮಾಡಬೇಕು ಎಂದು ಹೇಳಿದರು.
ಮಾಜಿ ಸಚಿವ ರಾಜಣ್ಣ ಅವರ ಹೇಳಿಕೆ ತಿರುಚಿ ಪಕ್ಷದ ಹೈಕಮಾಂಡ್‌ಗೆ ಹೇಳುವ ಪ್ರಯತ್ನ ಆಗಿದೆ. ಹೀಗಾಗಿ, ರಾಜಣ್ಣ ಅವರು ದೆಹಲಿಗೆ ಹೋಗಿ ಹೈಕಮಾಂಡ್‌ಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಬಗ್ಗೆ ಹೈಕಮಾಂಡ್ ಮೃಧು ಧೋರಣೆ ತಾಳಿದೆ, ನಮಗೊಂದು ನ್ಯಾಯ, ಅವರಿಗೊಂದು ನ್ಯಾಯನಾ ಎಂದು ಮಾಜಿ ಸಚಿವ ರಾಜಣ್ಣ ಪ್ರಶ್ನಿಸಿದ್ದಾರೆ. ಇದು, ನಮ್ಮ ವ್ಯಾಪ್ತಿಗೆ ಬರಲ್ಲ. ಅದನ್ನೆಲ್ಲ ಸೂಕ್ಷ್ಮವಾಗಿ ಹೈಕಮಾಂಡ್ ಗಮನಿಸಬೇಕು ಎಂದು ಜಾರಕಿಹೊಳಿ ಹೇಳಿದರು.