ಬೆಂಗಳೂರು: ಮೇ 1 ವಿಶ್ವದಾದ್ಯಂತ ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಷ್ಟಕ್ಕೂ ಮೇ 1 ರಂದು ಕಾರ್ಮಿಕರ ದಿನಾಚರಣೆ ಆರಂಭವಾಗಿದ್ದು ಯಾವ ಕಾರಣಕ್ಕೆ ಇಲ್ಲಿದೆ ನೋಡಿ ವಿವರ.
ಒಂದು ದೇಶ, ಒಂದು ಸಂಸ್ಥೆ ಕಟ್ಟುವುದರಲ್ಲಿ ಕಾರ್ಮಿಕರ ಶ್ರಮ ಅಪಾರವಾಗಿದೆ. ಹಣದಿಂದ ಎಲ್ಲವನ್ನೂ ಕೊಳ್ಳಲು ಸಾಧ್ಯವಿಲ್ಲ. ದೇಶ ಕಟ್ಟುವಲ್ಲಿ ಕಾರ್ಮಿಕರ ಶ್ರಮ ಪ್ರತಿಯೊಂದು ಹಂತದಲ್ಲೂ ಇದೆ. ಹೀಗಾಗಿ ಕಾರ್ಮಿಕರನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ.
1886 ರಲ್ಲಿ ಮೊದಲ ಬಾರಿಗೆ ಮೇ ಡೇ ಅಥವಾ ಕಾರ್ಮಿಕರ ದಿನ ಆಚರಿಸಲಾಯಿತು. ಕಾರ್ಮಿಕರು ತಮಗೆ ಕೆಲಸದ ಅವಧಿ ಹೆಚ್ಚಾಗುತ್ತಿದೆ ಮತ್ತು ಕೆಲಸದ ವಾತಾವರಣ ಇನ್ನಷ್ಟು ಸುಧಾರಿಸಬೇಕು ಎಂಬ ಕಾರಣಕ್ಕೆ ಸ್ಟ್ರೈಕ್ ಶುರು ಮಾಡಿದ್ದರು. ಚಿಕಾಗೋದ ಹೇಮಾರ್ಕೆಟ್ ಸ್ಕ್ವೇರ್ ನಲ್ಲಿ ಕಾರ್ಮಿಕರು ಪ್ರತಿಭಟಿಸುತ್ತಿದ್ದಾಗ ಬಾಂಬ್ ಬ್ಲಾಸ್ಟ್ ಆಗಿತ್ತು. ಇದರಿಂದಾಗಿ ಕಾರ್ಮಿಕ ಚಳವಳಿ ಇನ್ನಷ್ಟು ಬಲಗೊಂಡಿತು.
ಕೇವಲ ಅಮೆರಿಕಾ ಮಾತ್ರವಲ್ಲ, ವಿಶ್ವದ ನಾನಾ ಭಾಗಗಳಿಗೂ ಈ ಚಳವಳಿ ಪಸರಿಸಿತು. ಹೀಗಾಗಿ ಮೇ 1 ರಂದು ಕಾರ್ಮಿಕರು ಒಟ್ಟಾಗಿ ತಮಗಾಗಿ ಹೋರಾಟ ನಡೆಸಲು ಒಂದು ದಿನವನ್ನು ಆಯ್ಕೆ ಮಾಡಿಕೊಂಡರು. ಪರಿಣಾಮ ಈಗ ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಮೇ 1 ರನ್ನು ಕಾರ್ಮಿಕರ ದಿನವಾಗಿ ಆಚರಿಸಲಾಗುತ್ತಿದೆ.