Photo Courtesy: Twitter
ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಕುಟುಂಬದಿಂದ ಹಿಡಿದು ದೇಶದವರೆಗೂ ಶಕ್ತಿಯಾಗಿ ನಿಂತಿರುವ ಮಹಿಳೆಗೆ ಗೌರವ ಸಲ್ಲಿಸುವ ದಿನ. ಈ ಹಿನ್ನಲೆಯಲ್ಲಿ ನಮ್ಮ ದೇಶದ ಮೊದಲ ಮಹಿಳಾ ಮುಖ್ಯಮಂತ್ರಿ ಯಾರಾಗಿದ್ದರು ಅವರ ಹಿನ್ನಲೆಯೇನು ಎಂದು ತಿಳಿದುಕೊಳ್ಳೋಣ.
ನಮ್ಮ ದೇಶ ಇದೀಗ ಮಹಿಳಾ ರಾಷ್ಟ್ರಪತಿ, ನ್ಯಾಯಮೂರ್ತಿಗಳು, ಪೊಲೀಸ್ ಮಹಾನಿರ್ದೇಶಕರು, ಮುಖ್ಯಮಂತ್ರಿಗಳನ್ನು ಸಾಕಷ್ಟು ಕಂಡಿದೆ. ಆದರೆ ಮೊದಲ ಬಾರಿಗೆ ಒಂದು ರಾಜ್ಯದ ಮುಖ್ಯಮಂತ್ರಿಯಾದ ಮಹಿಳೆಯ ಯಾರು ಎಂದು ನಿಮಗೆ ಗೊತ್ತಾ? ಅವರು ಸುಚೇತಾ ಕೃಪಲಾನಿ.
ಸುಚೇತಾ 1963 ರಿಂದ 1967 ರವರೆಗೆ ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಅವರು ದೇಶದ ಮೊದಲ ಮಹಿಳಾ ಮುಖ್ಯಮಂತ್ರಿ ಎಂದು ಹೆಗ್ಗಳಿಕೆ ಹೊಂದಿದ್ದಾರೆ. ಅವರು ಉತ್ತರ ಪ್ರದೇಶ ರಾಜ್ಯದ ನಾಲ್ಕನೇ ಮುಖ್ಯಮಂತ್ರಿಯಾಗಿದ್ದರು. ಕಾನ್ಪುರ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದ ಸುಚೇತಾ ದಕ್ಷ ಮುಖ್ಯಮಂತ್ರಿಯಾಗಿದ್ದರು.
ಚಿಕ್ಕವಯಸ್ಸಿನಲ್ಲೇ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದವರು. ಬಳಿಕ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿ ಜೈಲುವಾಸವನ್ನೂ ಅನುಭವಿಸಿದ್ದರು. ಭಾರತದ ಸಂವಿಧಾನ ರಚನೆ ಉಪಸಮಿತಿಯಲ್ಲಿ ಅವರೂ ಸದಸ್ಯರಾಗಿದ್ದರು. 1940 ರಲ್ಲಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ನ್ನು ಸ್ಥಾಪಿಸಿದ ದಿಟ್ಟೆ. ಸ್ವಾತಂತ್ರ್ಯಾ ನಂತರ ಲೋಕಸಭೆ ಚುನಾವಣೆಗೂ ಸ್ಪರ್ಧಿಸಿದ್ದರು. 1971 ರಲ್ಲಿ ಅವರು ರಾಜಕೀಯದಿಂದ ನಿವೃತ್ತಿ ಪಡೆದರು. 1974 ರಲ್ಲಿ ಸುಚೇತಾ ನಿಧನರಾದರು. ಆದರೆ ಇಂದಿಗೂ ದೇಶ ಕಂಡ ದಕ್ಷ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿ ಅವರನ್ನು ಗುರುತಿಸುತ್ತದೆ.