Select Your Language

Notifications

webdunia
webdunia
webdunia
webdunia

ಭಾರತದ ಕೋವ್ಯಾಕ್ಸಿನ್ಗೆ WHO ಅನುಮೋದನೆ ಇನ್ನಷ್ಟು ವಿಳಂಬ

ಭಾರತದ ಕೋವ್ಯಾಕ್ಸಿನ್ಗೆ WHO ಅನುಮೋದನೆ ಇನ್ನಷ್ಟು ವಿಳಂಬ
ನವದೆಹಲಿ , ಶನಿವಾರ, 18 ಸೆಪ್ಟಂಬರ್ 2021 (10:14 IST)
ನವದೆಹಲಿ, ಸೆ 18 : ಭಾರತದಲ್ಲಿ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆ 'ಕೋವ್ಯಾಕ್ಸಿನ್'ಗೆ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆ ಅನುಮೋದನೆ ದೊರೆಯುವಲ್ಲಿ ಮತ್ತಷ್ಟು ವಿಳಂಬವಾಗಲಿದೆ.
ಅಕ್ಟೋಬರ್ 5ರಂದು ಕೊರೊನಾ ಲಸಿಕೆ ಸಂಬಂಧ ತಜ್ಞರ ಸಲಹಾ ಸಮಿತಿ (SAGE) ಸಭೆ ಸೇರಲಿದ್ದು, ಅಂದು ಕೋವ್ಯಾಕ್ಸಿನ್ ಲಸಿಕೆಗೆ ತುರ್ತು ಬಳಕೆ ಅನುಮೋದನೆ (EUL) ನೀಡುವ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಈ ಸಲಹಾ ಸಮಿತಿ ಕೋವ್ಯಾಕ್ಸಿನ್ ಲಸಿಕೆ ಹಂತ 1, 2 ಹಾಗೂ 3ನೇ ಪ್ರಯೋಗಗಳ ಆಧಾರದ ಮೇಲೆ ತುರ್ತು ಅನುಮೋದನೆಗೆ ಶಿಫಾರಸು ಮಾಡಲಿದೆ. ಲಸಿಕೆಯ ಸುರಕ್ಷತೆ, ರೋಗನಿರೋಧಕ ಪ್ರಮಾಣ, ದಕ್ಷತೆಯ ಕುರಿತ ಅಧ್ಯಯನಗಳನ್ನು ಗಣನೆಗೆ ತೆಗೆದುಕೊಳ್ಳಲಿದೆ. ಜಾಗತಿಕ, ಪ್ರಾದೇಶಿಕ ಹಾಗೂ ದೇಶೀಯ ಮಟ್ಟದ ಯೋಜನೆಗಳಲ್ಲಿ ಲಸಿಕೆ ಸುರಕ್ಷತೆ ಕುರಿತು ಪರಿಶೀಲನೆ ನಡೆಸಲಿದೆ.
SAGE ಕಾರ್ಯಕಾರಿ ಸಮಿತಿ ಮೌಲ್ಯಮಾಪನಗಳ ಆಧಾರದ ಮೇಲೆ WHO ಲಸಿಕೆಯ ತುರ್ತು ಬಳಕೆ ಅನುಮೋದನೆ ನೀಡಲು ಲಭ್ಯವಿರುವ ಅಂಶಗಳನ್ನು ಪರಿಗಣಿಸಲಿದೆ.
ಭಾರತ್ ಬಯೋಟೆಕ್, ಶುಕ್ರವಾರ ತುರ್ತು ಬಳಕೆಯ ಅನುಮೋದಿತ ಪಟ್ಟಿಯಲ್ಲಿ ತನ್ನ ಕೋವ್ಯಾಕ್ಸಿನ್ ಲಸಿಕೆ ಸೇರ್ಪಡೆಗೆ ವಿಶ್ವ ಆರೋಗ್ಯ ಸಂಸ್ಥೆಗೆ ಎಲ್ಲಾ ಮಾಹಿತಿಯನ್ನು ಸಲ್ಲಿಸಿದ್ದು, ಪ್ರತಿಕ್ರಿಯೆಗೆ ಕಾಯುತ್ತಿರುವುದಾಗಿ ತಿಳಿಸಿದೆ. ಅನುಮೋದನೆ ಪ್ರಕ್ರಿಯೆ ಸಂಬಂಧ ಪ್ರತಿಕ್ರಿಯಿಸುವುದು ಸೂಕ್ತವಲ್ಲ ಎಂದು ಕಂಪನಿ ತಿಳಿಸಿದೆ.
ಕೋವ್ಯಾಕ್ಸಿನ್ನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ, ಲಸಿಕೆಯು 77.8% ದಕ್ಷತೆ ಪ್ರದರ್ಶಿಸಿದೆ. EULಗಾಗಿ ಆರೋಗ್ಯ ಸಂಸ್ಥೆಗೆ ಎಲ್ಲಾ ಸಂಬಂಧಿತ ಪ್ರಯೋಗದ ಮಾಹಿತಿಗಳನ್ನು ಸಲ್ಲಿಸಲಾಗಿದೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಎಲ್ಲಾ ಪ್ರಶ್ನೆಗಳಿಗೆ ಸ್ಪಷ್ಟೀಕರಣ ನೀಡಲಾಗಿದೆ. ಹಲವು ಲಸಿಕೆಗಳನ್ನು ಜವಾಬ್ದಾರಿಯುತವಾಗಿ ಅಭಿವೃದ್ಧಿಪಡಿಸಿರುವ ಸಂಸ್ಥೆಯಾಗಿ, ಈ ವಿಳಂಬದ ಕುರಿತು ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ' ಎಂದು ಕಂಪನಿ ಹೇಳಿಕೊಂಡಿದೆ.
ಈ ವಾರದ ಒಳಗೆ ಭಾರತದ ಕೋವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ದೊರೆಯುವ ನಿರೀಕ್ಷೆ ವ್ಯಕ್ತವಾಗಿತ್ತು.
ಭಾರತದಲ್ಲಿ ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ ನೀಡಿದೆ. ಹಲವು ದೇಶಗಳಿಗೆ ಈ ಲಸಿಕೆಯನ್ನು ರಫ್ತು ಮಾಡಲಾಗಿದೆ. ಇದಾಗ್ಯೂ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ದೊರೆತಿಲ್ಲ.
ಆರಂಭದಲ್ಲಿ, ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಾಯೋಗಿಕ ದತ್ತಾಂಶ ಕೊರತೆ ಕಾರಣವಾಗಿ ಕೋವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಲು ಹಿಂದೇಟು ಹಾಕಿತ್ತು. ಲಸಿಕೆಯ ವೈದ್ಯಕೀಯ ಪ್ರಯೋಗಗಳ ಮಾಹಿತಿ ಕೊರತೆಯನ್ನು ಉಲ್ಲೇಖಿಸಿದ್ದ ಅಮೆರಿಕದ ಆಹಾರ ಹಾಗೂ ಔಷಧ ನಿಯಂತ್ರಕ ಸಂಸ್ಥೆ, ಈ ಲಸಿಕೆಯ ತುರ್ತು ಬಳಕೆಯ ದೃಢೀಕರಣಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಇದು ವಿದೇಶಗಳಲ್ಲಿ ಅನುಮೋದನೆ ಪಡೆಯಲು ಕೋವ್ಯಾಕ್ಸಿನ್ಗೆ ಅಡೆತಡೆ ಉಂಟು ಮಾಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಬೇರೆ ದೇಶಗಳಿಗೆ ಕೊರೊನಾ ಲಸಿಕೆ ರಫ್ತು ಮಾಡಲು ಭಾರತ್ ಬಯೋಟೆಕ್ಗೆ ತುರ್ತು ಬಳಕೆ ಪಟ್ಟಿ (EUL) ಅವಶ್ಯಕವಾಗಿದೆ. ಅನುಮೋದನೆ ದೊರೆತರೆ ಕೋವ್ಯಾಕ್ಸಿನ್ ಲಸಿಕೆಯನ್ನು ಇನ್ನಷ್ಟು ದೇಶಗಳಿಗೆ ರಫ್ತು ಮಾಡಲು ಸಾಧ್ಯವಾಗಲಿದೆ. ಜೊತೆಗೆ ಈ ಲಸಿಕೆ ಪಡೆದ ಜನರಿಗೆ ಅಂತರರಾಷ್ಟ್ರೀಯ ಪ್ರಯಾಣವನ್ನು ಸರಾಗಗೊಳಿಸಲಿದೆ.
ಭಾರತದಲ್ಲಿ ಆರಂಭಿಕವಾಗಿ ಅನುಮೋದನೆ ಪಡೆದ ಎರಡು ಕೊರೊನಾ ಲಸಿಕೆಗಳಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯೂ ಒಂದು.
ಇಲ್ಲಿಯವರೆಗೆ ಆಸ್ಟ್ರಾಜೆನೆಕಾ- ಆಕ್ಸ್ಫರ್ಡ್ನ ಕೋವಿಶೀಲ್ಡ್, ಮಾಡೆರ್ನಾ, ಜಾನ್ಸನ್ ಅಂಡ್ ಜಾನ್ಸನ್, ಫೈಜರ್, ಸಿನೋಫಾರ್ ಹಾಗೂ ಸಿನೋವ್ಯಾಕ್ ಲಸಿಕೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಲಸಿಕೆ ಅಭಿಯಾನದಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಿದ ಬಿಎಂಸಿ