ಲಕ್ನೋ : ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಆರಂಭವಾಗಿದ್ದು, ನಿಮ್ಮ ಮತವೇ ಉಜ್ವಲ ಭವಿಷ್ಯಕ್ಕೆ ಆಧಾರವೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತದಾರರಿಗೆ ಕರೆಕೊಟ್ಟಿದ್ದಾರೆ.
ಅಮಿತ್ ಶಾ ಅವರು ಟ್ವಿಟ್ಟರ್ ನಲ್ಲಿ, ಇಂದು ಉತ್ತರಪ್ರದೇಶದಲ್ಲಿ ಮೊದಲ ಹಂತದ ಮತದಾನವಾಗಲಿದ್ದು, ರಾಜ್ಯದಲ್ಲಿ ಅಭಿವೃದ್ಧಿಯೊಂದಿಗೆ ಭದ್ರತೆ, ಗೌರವ ಮತ್ತು ಉತ್ತಮ ಆಡಳಿತ ನೀಡುವ ಸರ್ಕಾರವನ್ನು ಆಯ್ಕೆ ಮಾಡಬೇಕು.
ಈ ಹಂತದ ಮತದಾನದಲ್ಲಿ ನನ್ನ ಎಲ್ಲ ಸಹೋದರ ಸಹೋದರಿಯರು ನಮ್ಮ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ. ನಿಮ್ಮ ಒಂದು ಮತವು ಉತ್ತರಪ್ರದೇಶದ ಉಜ್ವಲ ಭವಿಷ್ಯದ ಆಧಾರವಾಗಿದೆ ಎಂದು ಟ್ವೀಟ್ನಲ್ಲಿ ಮಾಡಿದ್ದಾರೆ.
ಉತ್ತರಪ್ರದೇಶದ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮೊದಲ ಹಂತದ ಮತದಾನ ನಡೆಯಲಿದೆ. ಇಂದು ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಲಿದೆ.
ಮಥುರಾ, ಮುಜಾಫರ್ನಗರ, ಮೀರತ್, ಗಾಜಿಯಾಬಾದ್, ಬುಲಂದ್ಶಹರ್, ಹಾಪುರ್, ಶಾಮ್ಲಿ, ಬಾಗ್ಪತ್, ಅಲಿಗಢ್, ಆಗ್ರಾ ಮತ್ತು ಗೌತಮ್ ಬುದ್ಧ ನಗರ ಜಿಲ್ಲೆಗಳಲ್ಲಿ ಇಂದು ಮತದಾನ ನಡೆಯಲಿದೆ. ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ 623 ಅಭ್ಯರ್ಥಿಗಳು ಕಣದಲ್ಲಿದ್ದು, ಸುಮಾರು 2.27 ಕೋಟಿ ಮತದಾರರು ಈ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.