ಚಂಡೀಗಢ : ಪಂಜಾಬ್ ನೂತನ ಸಚಿವ ಪರ್ಗತ್ ಸಿಂಗ್ ಅವರು ದೆಹಲಿ ಮುಖ್ಯಮಂತ್ರಿ ,ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಗುರುವಾರ ಕಿಡಿ ಕಾರಿದ್ದಾರೆ.
ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಛನ್ನಿ ಅವರು ಕಳಂಕಿತರು ಮತ್ತು ಭ್ರಷ್ಟ ಅಧಿಕಾರಿಗಳನ್ನು ವಜಾ ಮಾಡಿ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ ಕೇಜ್ರಿವಾಲ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ , ನಮಗೆ ಅವರ ಸಲಹೆಯ ಅಗತ್ಯವಿಲ್ಲ. ನಾವು ಪಂಜಾಬ್ನ ಒಳಿತನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ನಮ್ಮ ಹೋರಾಟವು ಅನೇಕ ಸಮಸ್ಯೆಗಳ ಕುರಿತಾಗಿ ಹೊರತು ಯಾವುದೇ ವ್ಯಕ್ತಿಯನ್ನು ಆಧರಿಸಿಲ್ಲ ಎಂದಿದ್ದಾರೆ.
ಪಂಜಾಬ್ ಗೆ ಆಗಮಿಸಿದ್ದ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾದ ಚರಣ್ ಜಿತ್ ಸಿಂಗ್ ಛನ್ನಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಅವರು ಕಳಂಕಿತರು ಮತ್ತು ಭ್ರಷ್ಟ ಅಧಿಕಾರಿಗಳನ್ನು ವಜಾ ಮಾಡಿ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿರು, ಮಾತ್ರವಲ್ಲದೆ ಬರ್ಗಾರಿ ಗ್ರಾಮದಲ್ಲಿ ಸಿಖ್ ಪವಿತ್ರ ಗ್ರಂಥ ಅಪವಿತ್ರ ಗೊಳಿಸಿದ ವಿಚಾರದ ಕುರಿತು ಪ್ರತಿಕ್ರಿಯಿಸಿ, 'ಪ್ರಕರಣದ ಮಾಸ್ಟರ್ ಮೈಂಡ್ ಯಾರು ಎನ್ನುವುದನ್ನು ನಾನೇನು ಹೇಳಬೇಕಾಗಿಲ್ಲ. ಇದುವರೆಗೆ ಅವನಿಗೆ ಯಾವುದೇ ಶಿಕ್ಷೆಯಾಗಿಲ್ಲ. ಛನ್ನಿ ಸಾಹೇಬರು ಕುನ್ವಾರ್ ವಿಜಯ್ ಪ್ರತಾಪ್ ಅವರ ವರದಿಯನ್ನು ಓದಲೇಬೇಕು. ಅಲ್ಲಿ ಅವರಿಗೆ ಆರೋಪಿಗಳ ಹೆಸರು ಸಿಗುತ್ತದೆ. 24 ಗಂಟೆಗಳ ಒಳಗೆ ಅವರನ್ನು ಬಂಧಿಸಲಿ' ಎಂದಿದ್ದರು.