ಉತ್ತರಾಖಂಡ: ಪತಿ-ಪತ್ನಿ ನಡುವೆ ಜಗಳವಾಗೋದು ಸಾಮಾನ್ಯ. ಆದರೆ ಇಲ್ಲಿ ದಂಪತಿ ನಡುವಿನ ಕಲಹ ತಾರಕಕ್ಕೇರಿ ಪತಿ ಬಹುಮಹಡಿ ಕಟ್ಟಡದ ಬಾಲ್ಕನಿಯನ್ನು ಪತ್ನಿಯನ್ನು ನೇತು ಹಾಕಿದ ಅಮಾನವೀಯ ಘಟನೆ ನಡೆದಿದೆ.
ಸೋಷಿಯಲ್ ಮೀಡಿಯಾದಲ್ಲಿ ಈ ದೃಶ್ಯ ವೈರಲ್ ಆಗಿದೆ. ಉತ್ತರಾಖಂಡದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪತ್ನಿ ಜೊತೆ ಜಗಳವಾಡುತ್ತಿದ್ದ ಗಂಡ ಆಕೆಯ ಕೈ ಹಿಡಿದು ಬಾಲ್ಕನಿಯಿಂದ ಕೆಳಗೆ ನೇತಾಡುವ ಸ್ಥಿತಿಯಲ್ಲಿ ನಿಲ್ಲಿಸಿದ್ದಾನೆ.
ಅಪ್ಪಿ ತಪ್ಪಿ ಏನಾದರೂ ಕೆಳಗೆ ಬಿದ್ದರೆ ಪತ್ನಿಯ ಪ್ರಾಣ ಹೋಗೋದು ಗ್ಯಾರಂಟಿ. ಪತ್ನಿಯ ಎರಡೂ ಕೈಹಿಡಿದುಕೊಂಡು ಆತ ಮತ್ತಷ್ಟು ಜಗಳವಾಡುತ್ತಿದ್ದರೆ ಭಯಗೊಂಡಿರುವ ಪತ್ನಿ ಪ್ರಾಣಕ್ಕಾಗಿ ಅಂಗಲಾಚುತ್ತಿದ್ದಾಳೆ.
ಈ ಭಯಾನಕ ದೃಶ್ಯವನ್ನು ನೋಡಿ ಅಲ್ಲಿದ್ದವರು ಕಿರುಚಿಕೊಳ್ಳುತ್ತಿದ್ದು, ಆಕೆಯನ್ನು ಕಾಪಾಡುವಂತೆ ಗಂಡನಿಗೆ ಗೋಗೆರೆಯುತ್ತಿದ್ದಾರೆ. ಆದರೆ ಅಕ್ಕಪಕ್ಕದವರು ಏನೇ ಹೇಳಿದರೂ ಕಿವಿ ಮೇಲೇ ಹಾಕದೇ ಗಂಡ ಹೆಂಡತಿಯ ಪ್ರಾಣದ ಜೊತೆ ಚೆಲ್ಲಾಟವಾಡಿದ್ದಾನೆ. ಈತನ ವಿರುದ್ಧ ತಕ್ಕ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.