ನವದೆಹಲಿ: ನಾನೇನು ಮಾತನಾಡಬೇಕು ಎಂದು ನಾನು ನಿರ್ಧರಿಸುತ್ತೇನೆ ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಗೃಹ ಸಚಿವ ಅಮಿತ್ ಶಾ ಬೆವರಿಳಿಸಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಿನ್ನೆ ಸಂಸತ್ ನಲ್ಲಿ ಗೃಹ ಸಚಿವ ಅಮಿತ್ ಶಾ ಮಾತನಾಡುವಾಗ ಮಧ್ಯಪ್ರವೇಶಿಸಿದ್ದ ರಾಹುಲ್ ಗಾಂಧಿ ಮತಗಳ್ಳತನದ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ. ಮೂರು ಪತ್ರಿಕಾಗೋಷ್ಠಿಗಳನ್ನು ಮಾಡಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದ್ದರು.
ತಮ್ಮ ಸರದಿ ಬಂದಾಗ ಅಮಿತ್ ಶಾ ಮಾತನಾಡಲು ಶುರು ಮಾಡಿದ್ದರು. ಮಧ್ಯಪ್ರವೇಶಿಸಿದ ರಾಹುಲ್ ಗಾಂಧಿ ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡಲಿ ಎಂದು ಹೇಳಿದರು. ಇದು ಅಮಿತ್ ಶಾರನ್ನು ಕೆರಳಿಸಿತು.
ಕಳೆದ 30 ವರ್ಷಗಳಿಂದ ಶಾಸಕನಾಗಿ ಸಂಸದನಾಗಿ ಅನುಭವ ಹೊಂದಿದ್ದೇನೆ. ನಾನು ಏನು ಮಾತನಾಡಬೇಕು, ಯಾವಾಗ ಮಾತನಾಡಬೇಕು ಎಂಬುದನ್ನು ನಾನು ನಿರ್ಧರಿಸುತ್ತೇನೆ. ಸಂಸತ್ ನಿಮ್ಮ ಇಷ್ಟದಂತೆ ನಡೆಯಲ್ಲ. ಎಲ್ಲಾ ಪ್ರಶ್ನೆಗೂ ನಾನು ಉತ್ತರ ಕೊಡುತ್ತೇನೆ. ಆದರೆ ನಾನು ಉತ್ತರ ಕೊಡುವವರೆಗೆ ಕಾಯುವ ತಾಳ್ಮೆ ನಿಮಗೆ ಬೇಕು ಎಂದು ರಾಹುಲ್ ಗಾಂಧಿಯತ್ತ ರೋಷಾವೇಷದಿಂದ ಮಾತನಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.