Publish Date: Wed, 15 Jul 2026 (10:41 IST)
Updated Date: Wed, 15 Jul 2026 (10:45 IST)
ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಹಾಗೂ ವೀವ್ಸ್ ಗಿಟ್ಟಿಸಿಕೊಳ್ಳಲು ಮತ್ತು ಕ್ಷಣಿಕ 'ಥ್ರಿಲ್'ಗಾಗಿ ಜೀವವನ್ನೇ ಪಣಕ್ಕಿಡುವ ಚಟ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ, ರಭಸದಿಂದ ಆರ್ಭಟಿಸುತ್ತಿದ್ದ ಸಮುದ್ರದಲ್ಲಿ ಅಪಾಯಕಾರಿ ಸಾಹಸ ಮಾಡಲು ಹೋಗಿ ಯುವಕನೊಬ್ಬ ಭಾರಿ ಬೆಲೆ ತೆತ್ತಿರುವ ಘಟನೆ ನಡೆದಿದ್ದು, ಆತನ ಹೋರಾಟದ ಶಾಕಿಂಗ್ ವಿಡಿಯೋ ಈಗ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಎತ್ತರಕ್ಕೆ ಎದ್ದೇಳುತ್ತಿದ್ದ ಬೃಹತ್ ಅಲೆಗಳ ಮಧ್ಯೆ ಯುವಕನೊಬ್ಬ ಜಿಗಿದು ಸ್ಟಂಟ್ ಮಾಡಲು ಯತ್ನಿಸಿದ್ದಾನೆ. ಆದರೆ, ಕ್ಷಣಾರ್ಧದಲ್ಲೇ ನೀರಿನಾಳದ ಪ್ರಬಲ ಸೆಳೆತ ಹಾಗೂ ಸರಣಿ ಅಲೆಗಳ ಹೊಡೆತಕ್ಕೆ ಸಿಲುಕಿದ ಆತ ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡಿದ್ದಾನೆ.
ಅಲೆಗಳ ಭರಾಟೆಯಲ್ಲಿ ನೀರಿನಿಂದ ಮೇಲೆ ಬರಲಾಗದೆ, ಉಸಿರುಗಟ್ಟಿ ಕೊಚ್ಚಿಹೋಗುವ ಹಂತ ತಲುಪಿದ್ದ ಆತನನ್ನು ನೋಡಿ ದಡದಲ್ಲಿದ್ದ ಜನರು ಬೆಚ್ಚಿಬಿದ್ದಿದ್ದಾರೆ. ಸಾವು-ಬದುಕಿನ ನಡುವೆ ತೀವ್ರ ಹೋರಾಟ ನಡೆಸಿದ ಆತ, ಅದೃಷ್ಟವಶಾತ್ ಕೊನೆಗೂ ಪ್ರಾಣಾಪಾಯದಿಂದ ಪಾರಾಗಿ ದಡ ತಲುಪುವಲ್ಲಿ ಯಶಸ್ವಿಯಾಗಿದ್ದಾನೆ. ಇಂದಿನ ಯುವಜನತೆ ರೀಲ್ಸ್ ಹಾಗೂ ಶಾರ್ಟ್ ವಿಡಿಯೋಗಳಿಗಾಗಿ ಜಲಪಾತಗಳು, ಸಮುದ್ರ ತೀರ ಹಾಗೂ ಕಂದಕಗಳ ಬಳಿ ನಿಯಮಗಳನ್ನು ಗಾಳಿಗೆ ತೂರಿ ಸಾಹಸ ಪ್ರದರ್ಶಿಸಲು ಮುಂದಾಗುತ್ತಿದ್ದಾರೆ. ಈ ಘಟನೆಯು "ಕ್ಷಣಿಕ ಥ್ರಿಲ್ ಮತ್ತು ಅಜಾಗರೂಕತೆ ಯಾವುದೇ ಕ್ಷಣದಲ್ಲೂ ಜೀವಕ್ಕೇ ಕುತ್ತು ತರಬಹುದು" ಎಂಬುದಕ್ಕೆ ಪ್ರಬಲ ಎಚ್ಚರಿಕೆಯಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ