Publish Date: Tue, 14 Jul 2026 (10:27 IST)
Updated Date: Tue, 14 Jul 2026 (10:36 IST)
ಗುರುಗ್ರಾಮ್ (ಗುರ್ಗಾಂವ್): ಐಟಿ (IT) ಕ್ಷೇತ್ರದಲ್ಲಿ ಸುಮಾರು 19 ವರ್ಷಗಳ ಕಾಲ ಸುದೀರ್ಘ ಕೆಲಸ ಮಾಡಿದ ವ್ಯಕ್ತಿಯೊಬ್ಬರು ತಮ್ಮ ಕಾರ್ಪೊರೇಟ್ ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣಾವಧಿ ಕ್ಯಾಬ್ ಚಾಲಕನಾಗಿ ಬದಲಾಗಿರುವ ಹಾಗೂ ತಮ್ಮ ಜೀವನದ ನಿರ್ಧಾರವನ್ನು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸೌಂಡ್ ಮಾಡುತ್ತಿದೆ.
'ಜಿಪ್ ಇಲೆಕ್ಟ್ರಿಕ್' ಸಂಸ್ಥೆಯ ಸಿಇಒ ಮತ್ತು ಸಂಸ್ಥಾಪಕರಾದ ಆಕಾಶ್ ಗುಪ್ತಾ ಅವರು ಈ ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಚಾಲಕನೊಂದಿಗೆ ನಡೆಸಿದ ಸರಳ ಸಂಭಾಷಣೆ ಈಗ ಕೋಟ್ಯಂತರ ಜನರ ಗಮನ ಸೆಳೆದಿದೆ.
ಆದಾಯದಲ್ಲಿ ಭಾರಿ ಏರಿಕೆ: ಕ್ಯಾಬ್ ಸವಾರಿ ವೇಳೆ ಆಕಾಶ್ ಗುಪ್ತಾ ಅವರು "ತಿಂಗಳಿಗೆ ಎಷ್ಟು ಸಂಪಾದನೆ ಮಾಡುತ್ತೀರಾ?" ಎಂದು ಕೇಳಿದಾಗ, ಚಾಲಕ "ತಿಂಗಳಿಗೆ ಸುಮಾರು 80,000 ರಿಂದ 90,000 ರೂಪಾಯಿ ಸಿಗುತ್ತದೆ" ಎಂದು ಉತ್ತರಿಸಿದ್ದಾರೆ.
19 ವರ್ಷಗಳ ಐಟಿ ಅನುಭವ ಮತ್ತು ಕಾರ್ಪೊರೇಟ್ ಒತ್ತಡ: ಮೊದಲು ಎಲ್ಲಿ ಕೆಲಸ ಮಾಡುತ್ತಿದ್ದಿರಿ ಎಂದು ವಿಚಾರಿಸಿದಾಗ, ತಾವು 19 ವರ್ಷಗಳ ಕಾಲ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು, ಅಲ್ಲಿ ತಿಂಗಳಿಗೆ 40,000 ರೂಪಾಯಿ ಸಂಬಳ ಸಿಗುತ್ತಿತ್ತು ಎಂದು ತಿಳಿಸಿದ್ದಾರೆ.
"ಸ್ವಾತಂತ್ರ್ಯವೇ ಮುಖ್ಯ": ಅಷ್ಟೊಂದು ವರ್ಷದ ಸುದೀರ್ಘ ಐಟಿ ಉದ್ಯೋಗವನ್ನು ಏಕೆ ತೊರೆದಿರಿ ಎಂಬ ಪ್ರಶ್ನೆಗೆ, "ಅಲ್ಲಿ ಕೆಲಸದ ಸ್ವಾತಂತ್ರ್ಯ ಇರಲಿಲ್ಲ. ಆದರೆ ಇಲ್ಲಿ ನನ್ನ ಸಮಯಕ್ಕೆ ತಕ್ಕಂತೆ ಕೆಲಸ ಮಾಡುವ ಸ್ವಾತಂತ್ರ್ಯವಿದೆ ಮತ್ತು ಆದಾಯವೂ ದುಪ್ಪಟ್ಟಾಗಿದೆ" ಎಂದು ಚಾಲಕ ಮುಗುಳುನಗುತ್ತಾ ಉತ್ತರಿಸಿದ್ದಾರೆ.
ಕುಟುಂಬಕ್ಕೆ ಬೆಂಬಲ: ತಮಗೆ ಸಿಕ್ಕ ಈ ಆರ್ಥಿಕ ಸಬಲತೆಯಿಂದ ತಮ್ಮ ಹೆಂಡತಿಗೂ ಬೆಂಬಲ ನೀಡಿ, ಅವರ 12 ವರ್ಷಗಳ ಬ್ಯೂಟಿ ಕ್ಷೇತ್ರದ ಅನುಭವವನ್ನು ಬಳಸಿಕೊಂಡು ಸ್ವಂತ ಬ್ಯೂಟಿ ಸಲೂನ್/ಪಾರ್ಲರ್ ತೆರೆದುಕೊಟ್ಟಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಏನೇ ಆದರೂ, ಕಾರ್ಪೊರೇಟ್ ಜಗತ್ತಿನ ಕಟ್ಟುಪಾಡುಗಳು ಹಾಗೂ ಮಾನಸಿಕ ಒತ್ತಡಕ್ಕಿಂತ ನೆಮ್ಮದಿ ಮತ್ತು ಸ್ವತಂತ್ರ ದುಡಿಮೆಗೆ ಆದ್ಯತೆ ನೀಡಿದ ಈ ಚಾಲಕನ ಕಥೆ ಅನೇಕರಿಗೆ ಹೊಸ ಆಲೋಚನೆಯನ್ನು ನೀಡಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ