Publish Date: Mon, 20 Jul 2026 (11:09 IST)
Updated Date: Mon, 20 Jul 2026 (11:15 IST)
ಕಚ್ (ಗುಜರಾತ್) : ಗುಜರಾತ್‌ನ ಕಚ್ ಜಿಲ್ಲೆಯ ಆದಿಪುರದಲ್ಲಿರುವ ಪ್ರಸಿದ್ಧ ಸೇಂಟ್ ಝೇವಿಯರ್ಸ್ ಶಾಲೆಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಮಹಿಳಾ ಶಿಕ್ಷಕಿಯೊಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಹಿಂದೂ ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ತಂದಿದ್ದ ಹನುಮಾನ್ ಚಾಲೀಸಾ ಪುಸ್ತಕವನ್ನು ಶಿಕ್ಷಕಿ ಕಿತ್ತುಕೊಂಡು ಕಸದ ಬುಟ್ಟಿಗೆ ಎಸೆದಿದ್ದಾರೆ ಎನ್ನಲಾದ ಘಟನೆ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಸದ್ಯ ಶಾಲಾ ತರಗತಿಯಲ್ಲೇ ವಿದ್ಯಾರ್ಥಿಗಳು ಒಟ್ಟಾಗಿ ಹನುಮಾನ್ ಚಾಲೀಸಾ ಪಠಿಸುವ ಮೂಲಕ ವಿಶಿಷ್ಟವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿಗಳ ಪ್ರಕಾರ, ಶಾಲೆಯ ವಿದ್ಯಾರ್ಥಿನಿಯೊಬ್ಬಳು ತನ್ನ ಬ್ಯಾಗ್‌ನಲ್ಲಿ ಅಕಸ್ಮಾತ್ ಆಗಿ ಹನುಮಾನ್ ಚಾಲೀಸಾ ಪುಸ್ತಕವನ್ನು ಶಾಲೆಗೆ ತಂದಿದ್ದಳು.
ಪುಸ್ತಕ ಕಿತ್ತುಕೊಂಡ ಶಿಕ್ಷಕಿ: ತರಗತಿಯ ಅವಧಿಯಲ್ಲಿ ಇದನ್ನು ಗಮನಿಸಿದ ಮಹಿಳಾ ಶಿಕ್ಷಕಿ, ತಕ್ಷಣವೇ ವಿದ್ಯಾರ್ಥಿನಿಯ ಬಳಿ ಹೋಗಿ ಆ ಪುಸ್ತಕವನ್ನು ಬಲವಂತವಾಗಿ ಕಿತ್ತುಕೊಂಡು ದೂರ ಎಸೆದಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿನಿಗೆ ಆಘಾತ: ಶಿಕ್ಷಕಿಯ ಈ ವರ್ತನೆಯಿಂದ ತೀವ್ರ ಆಘಾತಕ್ಕೊಳಗಾದ ವಿದ್ಯಾರ್ಥಿನಿ, ಮನೆಗೆ ಮರಳಿದ ನಂತರ ಪೋಷಕರಿಗೆ ಇಡೀ ಘಟನೆಯನ್ನು ತಿಳಿಸಿದ್ದಾಳೆ.
ಭಾರಿ ಪ್ರತಿಭಟನೆ ಮತ್ತು ಪೊಲೀಸ್ ದೂರು:
ವಿಷಯ ತಿಳಿಯುತ್ತಿದ್ದಂತೆಯೇ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಪೋಷಕರು ಶಾಲೆಯ ಆವರಣದ ಮುಂದೆ ಜಮಾಯಿಸಿ ಭಾರಿ ಪ್ರತಿಭಟನೆ ನಡೆಸಿದರು.
ಪೊಲೀಸ್ ಠಾಣೆಗೆ ದೂರು: ಧಾರ್ಮಿಕ ನಂಬಿಕೆಗೆ ಅವಮಾನ ಮಾಡಿದ ಶಿಕ್ಷಕಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದರು.
ಶಿಕ್ಷಕಿ ವಜಾ: ಸಾರ್ವಜನಿಕರ ಆಕ್ರೋಶ ಮತ್ತು ಪರಿಸ್ಥಿತಿಯ ಗಾಂಭೀರ್ಯತೆಯನ್ನು ಅರಿತ ಸೇಂಟ್ ಝೇವಿಯರ್ಸ್ ಶಾಲಾ ಆಡಳಿತ ಮಂಡಳಿಯು ತಕ್ಷಣವೇ ಕ್ರಮ ಕೈಗೊಂಡು, ಆರೋಪಿತ ಮಹಿಳಾ ಶಿಕ್ಷಕಿಯನ್ನು ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಿತು. ಅಲ್ಲದೆ, ಘಟನೆಗೆ ಅಧಿಕೃತವಾಗಿ ಕ್ಷಮೆಯಾಚಿಸಿತು.
ತರಗತಿಯಲ್ಲೇ ಮೊಳಗಿದ ಹನುಮಾನ್ ಚಾಲೀಸಾ
ಈ ವಿವಾದಾತ್ಮಕ ಘಟನೆಯ ನಂತರ, ಅದೇ ಶಾಲೆಯ ತರಗತಿಯ ಕೊಠಡಿಯಲ್ಲಿ ವಿದ್ಯಾರ್ಥಿಗಳೆಲ್ಲರೂ ಒಟ್ಟಾಗಿ ಕುಳಿತು ಭಕ್ತಿಯಿಂದ ಹನುಮಾನ್ ಚಾಲೀಸಾವನ್ನು ಜಂಟಿಯಾಗಿ ಪಠಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಯಾವ ಪುಸ್ತಕವನ್ನು ಶಾಲೆಯೊಳಗೆ ತಂದಿದ್ದಕ್ಕೆ ಶಿಕ್ಷಕಿ ಆಕ್ಷೇಪ ವ್ಯಕ್ತಪಡಿಸಿದ್ದರೋ, ಅದೇ ಶಾಲೆಯ ಕೊಠಡಿಯಲ್ಲಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ಚಾಲೀಸಾ ಪಠಿಸುವ ಮೂಲಕ ಸೌಹಾರ್ದತೆ ಮತ್ತು ಸಾಂಕೇತಿಕ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. ಈ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ