Publish Date: Sat, 22 Aug 2026 (11:45 IST)
Updated Date: Sat, 22 Aug 2026 (11:51 IST)
ಉತ್ತರ ಪ್ರದೇಶದ ಬರೇಲಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ನಡೆದ ವಿಚಿತ್ರ ಹಾಗೂ ಆಕ್ರೋಶಭರಿತ ಘಟನೆಯೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹೌಸ್‌ಕೀಪಿಂಗ್ ಏಜೆನ್ಸಿ ಮೂಲಕ ಕೆಲಸಕ್ಕೆ ಸೇರಿದ್ದ ಯುವ ಪೌರಕಾರ್ಮಿಕನೊಬ್ಬ, ತನಗೆ ಬರಬೇಕಿದ್ದ ಪೂರ್ಣ ವೇತನ ಸಿಗದೇ ಶೋಷಣೆಗೊಳಗಾದ ಕಾರಣಕ್ಕೆ ನಗರ ಆರೋಗ್ಯ ಅಧಿಕಾರಿ ಎದುರೇ ಬಳೆಗಳನ್ನು ಎಸೆದು ಆಕ್ರೋಶ ಹೊರಹಾಕಿದ್ದಾನೆ.
ಯುವಕನಿಗೆ ಪ್ರತಿ ತಿಂಗಳು ₹13,000 ಸಂಬಳ ನೀಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ತಿಂಗಳಿಡೀ ರಕ್ತ-ಬೆವರು ಹರಿಸಿ ದುಡಿದರೂ, ಅಂತಿಮವಾಗಿ ಆತನ ಖಾತೆಗೆ ಜಮೆಯಾಗಿದ್ದು ಕೇವಲ ₹7,500 ಮಾತ್ರ. ಉಳಿದ ಮೊತ್ತವನ್ನು ಹಿಡಿತ (Deduction) ಹೆಸರಿನಲ್ಲಿ ಕಡಿತಗೊಳಿಸಲಾಗಿತ್ತು. ಈ ಅನ್ಯಾಯದಿಂದ ಕಂಗಾಲಾದ ಯುವಕ, ಮಹಾನಗರ ಪಾಲಿಕೆಯ ನಗರ ಆರೋಗ್ಯ ಅಧಿಕಾರಿ ಭಾನುಪ್ರಕಾಶ್ ಅವರ ಚೇಂಬರ್‌ಗೆ ತೆರಳಿ ನೇರವಾಗಿ ತಕರಾರು ತೆಗೆದಿದ್ದಾನೆ.
ಅಧಿಕಾರಿಯೆದುರು ಕೋಪದಿಂದ ಕುದಿಯುತ್ತಿದ್ದ ಯುವಕ, ತನ್ನ ಬಳಿಯಿದ್ದ ಬಳೆಗಳನ್ನು ಅವರ ಮೇಜಿನ ಮೇಲಿಟ್ಟು, "ಇವುಗಳನ್ನು ನೀವೇ ತೊಟ್ಟುಕೊಳ್ಳಿ, ಲಹಂಗಾ ಹೊಲಿಸಿಕೊಂಡು ಹಾಕಿ..." ಎಂದು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದನು. ಈ ಹಠಾತ್ ಬೆಳವಣಿಗೆಯಿಂದ ಕಚೇರಿಯಲ್ಲಿದ್ದ ಸಿಬ್ಬಂದಿ ದಿಗ್ಭ್ರಾಂತರಾಗಿದ್ದು, ಕೆಲ ಕಾಲ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಯಿತು.
ನನ್ನ ಹೆಂಡತಿ ಗರ್ಭಿಣಿ, ಹೆರಿಗೆಯ ವೆಚ್ಚಕ್ಕಾಗಿ ನನಗೆ ಈ ಹಣದ ತುರ್ತು ಅಗತ್ಯವಿತ್ತು. ದಿನವಿಡೀ ಕಷ್ಟಪಟ್ಟು ದುಡಿದರೂ ನ್ಯಾಯಯುತವಾಗಿ ಸಿಗಬೇಕಾದ ಹಣ ನೀಡದೆ ಈ ರೀತಿ ನಾಟಕ ಮಾಡುತ್ತಿದ್ದಾರೆ" ಎಂದು ಯುವಕ ಕಣ್ಣೀರಿಡುತ್ತಾ ತನ್ನ ಅಳಲು ತೋಡಿಕೊಂಡಿದ್ದಾನೆ. ಗುತ್ತಿಗೆದಾರರು ಮತ್ತು ಏಜೆನ್ಸಿಗಳು ಪೌರಕಾರ್ಮಿಕರ ಶ್ರಮವನ್ನು ಹೇಗೆ ಶೋಷಣೆ ಮಾಡುತ್ತಿವೆ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಶ್ರಮಿಕನ ಪರ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಅನುಕಂಪ ವ್ಯಕ್ತವಾಗುತ್ತಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ