ದೆಹಲಿ : ಉತ್ತರಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಶೇ.40ರಷ್ಟು ಟಿಕೆಟ್ನ್ನು ಮಹಿಳೆಯರಿಗೆ ನೀಡಲಾಗುವುದು ಎಂದು ಘೋಷಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರಪ್ರದೇಶ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಇದೀಗ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ.
ಮುಂದಿನ ವರ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ 12ನೇ ತರಗತಿ ಪಾಸ್ ಆದ ಹುಡುಗಿಯರಿಗೆ ಸ್ಮಾರ್ಟ್ಫೋನ್ ಮತ್ತು ಪದವಿಧರ ಯುವತಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್ ನೀಡುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ನಾನು ಉತ್ತರಪ್ರದೇಶದಲ್ಲಿ ಹಲವು ವಿದ್ಯಾರ್ಥಿಗಳನ್ನು ಭೇಟಿಯಾದೆ. ಅದರಲ್ಲಿ ಅನೇಕರು ತಮಗೆ ವಿದ್ಯಾಭ್ಯಾಸಕ್ಕೆ ಮತ್ತು ನಮ್ಮ ಸುರಕ್ಷತೆ ದೃಷ್ಟಿಯಿಂದಲೂ ಸ್ಮಾರ್ಟ್ಫೋನ್ ಬೇಕು ಎಂದು ಕೇಳಿದ್ದಾರೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಂಟರ್ಮೀಡಿಯಟ್ ಮುಗಿಸಿದ ಹುಡುಗಿಯರಿಗೆ ಸ್ಮಾರ್ಟ್ಫೋನ್ ಮತ್ತು ಪದವಿ ಮುಗಿಸಿದ ಯುವತಿಯರಿಗೆ ಸ್ಕೂಟಿ ನೀಡಲಿದ್ದೇವೆ. ಇದಕ್ಕೆ ನಮ್ಮ ಪ್ರಣಾಳಿಕೆ ಸಮಿತಿ ಒಪ್ಪಿರುವುದು ತುಂಬ ಸಂತೋಷದ ಸಂಗತಿ ಎಂದಿದ್ದಾರೆ.