Photo Courtesy: Instagram
ಹೈದರಾಬಾದ್: ಟಿವಿ ನಿರೂಪಕನ ಮೇಲೆ ಮೋಹಗೊಂಡ ಮಹಿಳೆ ಆತನನ್ನು ಮದುವೆಯಾಗಬೇಕೆಂದು ಅಪಹರಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಈ ಸಂಬಂಧ 31 ವರ್ಷದ ಉದ್ಯಮಿ ಮಹಿಳೆ ಭೋಗಿರೆಡ್ಡಿ ತ್ರಿಶ್ನ ಎಂಬಾಕೆಯನ್ನು ಬಂಧಿಸಲಾಗಿದೆ. ಮ್ಯೂಸಿಕ್ ಚಾನೆಲ್ ನಲ್ಲಿ ಆಂಕರ್ ಆಗಿ ಕೆಲಸ ಮಾಡುವ ಪ್ರಣವ್ ಸಿಸ್ತ್ಲಾ ಎಂಬಾತ ಸಂತ್ರಸ್ತ. ಎರಡು ವರ್ಷಗಳ ಹಿಂದೆ ಪ್ರಣವ್ ವೈವಾಹಿಕ ಅಂಕಣದಲ್ಲಿ ಫೋಟೋ ಪ್ರಕಟಿಸಿದ್ದ. ಇದನ್ನು ಗಮನಿಸಿದ ತ್ರಿಶಾ ಆತನ ಫೋನ್ ನಂಬರ್ ಪಡೆದುಕೊಂಡಿದ್ದಳು.
ಫೋನ್ ನಂಬರ್ ಮೂಲಕ ಪ್ರಣವ್ ನನ್ನು ಸಂಪರ್ಕಿಸಿದಾಗ ಆತ ಯಾರೋ ಕಿಡಿಗೇಡಿಗಳು ತನ್ನ ಫೋಟೋ ಹಾಕಿರುವುದಾಗಿ ಹೇಳಿದ್ದ. ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿಯೂ ಹೇಳಿದ್ದ. ಆದರೆ ಮಹಿಳೆ ನಿರಂತರವಾಗಿ ಪ್ರಣವ್ ಗೆ ಸಂದೇಶ ಕಳುಹಿಸುತ್ತಲೇ ಇದ್ದಳು. ಕೊನೆಗೆ ಆಕೆಯ ಕಾಟ ತಡೆಯಲಾಗದೇ ಪ್ರಣವ್ ಆಕೆಯ ನಂಬರ್ ಬ್ಲಾಕ್ ಮಾಡಿದ್ದ.
ಇದನ್ನು ಸಹಿಸಲಾಗದೇ ಮಹಿಳೆ ಆತನನ್ನು ಹೇಗಾದರೂ ಮಾಡಿ ಮದುವೆಯಾಗಲೇಬೇಕೆಂದು ಅಪಹರಣಕ್ಕೆ ಸ್ಕೆಚ್ ಹಾಕಿದ್ದಳು. ಇದಕ್ಕಾಗಿ ನಾಲ್ವರು ಗೂಂಡಾಗಳನ್ನು ಗೊತ್ತು ಮಾಡಿದ್ದಳು. ಅಲ್ಲದೆ, ಪ್ರಣವ್ ಚಲನವಲನಗಳನ್ನು ಗಮನಿಸಲು ಆತನ ಕಾರ್ ನಲ್ಲಿ ಟ್ರ್ಯಾಕಿಂಗ್ ಡಿವೈಸ್ ಫಿಕ್ಸ್ ಮಾಡಿದ್ದಳು.
ಫೆಬ್ರವರಿ 11 ರಂದು ಪ್ರಣವ್ ನನ್ನು ಅಪಹರಿಸಿದ್ದ ಮಹಿಳೆ ತನ್ನ ಕಚೇರಿಗೆ ಕರೆಯಿಸಿಕೊಂಡು ದೈಹಿಕವಾಗಿ ಚೆನ್ನಾಗಿ ಹಲ್ಲೆ ನಡೆಸಿದ್ದಳು. ಭಯಗೊಂಡ ಪ್ರಣವ್ ಆಕೆಯ ಜೊತೆ ಫೋನ್ ನಲ್ಲಿ ಮಾತನಾಡಲು ಒಪ್ಪಿಕೊಂಡಿದ್ದ. ಬಳಿಕ ಆತನನ್ನು ಮಹಿಳೆ ಬಿಟ್ಟುಕಳುಹಿಸಿದ್ದಳು.
ಬಳಿಕ ಈ ಬಗ್ಗೆ ಪ್ರಣವ್ ಉಪ್ಪಾಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಅದರಂತೆ ಮಹಿಳೆ ಮತ್ತು ಆಕೆಗೆ ಸಹಕರಿಸಿದ್ದ ನಾಲ್ವರು ಗೂಂಡಾಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ವಿಚಾರಣೆ ಜಾರಿಯಲ್ಲಿದೆ.