ತಿರುಪತಿ: ತಿರುಪತಿ ತಿರುಮಲ ದೇವಾಲಯ ಆಡಳಿತ ಮಂಡಳಿಯಲ್ಲಿ ಹಿಂದೂಯೇತರ ಧರ್ಮದವರಾಗಿರುವ ಅಧಿಕಾರಿಗಳು ಕೂಡಲೇ ಸ್ವಯಂ ನಿವೃತ್ತಿ ಪಡೆಯಿರಿ ಅಥವಾ ವರ್ಗಾವಣೆಯಾಗಬೇಕು ಎಂದು ತಿರುಪತಿ ಆಡಳಿತ ಮಂಡಳಿ ಸೂಚನೆ ಮಾಡಿದೆ.
ಹೊಸದಾಗಿ ರಚನೆಯಾಗಿರುವ ಟಿಟಿಡಿ ಮಂಡಳಿ ಹಿಂದೂಯೇತರರಿಗೆ ಇಲ್ಲಿ ಅವಕಾಶವಿರಲ್ಲ ಎಂದು ಈಗಾಗಲೇ ಹೇಳಿತ್ತು. ಅದರಂತೆ ಈಗ ಜಗನ್ ಆಡಳಿತಲ್ಲಿದ್ದಾಗ ಇದ್ದ ಅನ್ಯಧರ್ಮೀಯ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಲು ತೀರ್ಮಾನಿಸಲಾಗಿದೆ. ಅದರಂತೆ ಈಗ ಟಿಟಿಡಿ ಅನ್ಯಧರ್ಮೀಯ ಅಧಿಕಾರಿಗಳಿಗೆ ಒಂದೋ ಸ್ವಯಂ ನಿವೃತ್ತಿ ತೆಗೆದುಕೊಳ್ಳಿ ಇಲ್ಲಾಂದ್ರೆ ವರ್ಗಾವಣೆ ಮಾಡಿಸಿಕೊಳ್ಳಿ ಎಂದು ಸೂಚನೆ ನೀಡಿದೆ.
ತಿರುಪತಿ ಹಿಂದೂ ದೇವಾಲಯ. ಇಲ್ಲಿ ಅನ್ಯಧರ್ಮೀಯ ಅಧಿಕಾರಿಗಳು ಇರಬಾರದು ಎಂಬುದು ಟಿಟಿಡಿ ತೀರ್ಮಾನವಾಗಿದೆ. ಸುಮಾರು 7 ಸಾವಿರ ಅಧಿಕಾರಿಗಳಿದ್ದು ಆ ಪೈಕಿ ಸುಮಾರು 300 ಅನ್ಯಧರ್ಮೀಯರಿದ್ದಾರೆ. ಅವರಿಗೆ ವರ್ಗಾವಣೆ ಅಥವಾ ನಿವೃತ್ತಿಯಾಗಲು ಸೂಚಿಸಲಾಗಿದೆ ಎಂದು ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು ಹೇಳಿದ್ದಾರೆ.
ತಿರುಪತಿ ದೇವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೂಯೇತರ ಅಧಿಕಾರಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಆಂಧ್ರ ರಾಜ್ಯದ ಸರ್ಕಾರಕ್ಕೂ ಪತ್ರ ಬರೆಯುತ್ತೇವೆ ಎಂದು ಬಿಆರ್ ನಾಯ್ಡು ಹೇಳಿದ್ದಾರೆ. 1989 ರಲ್ಲೇ ತಿರುಪತಿ ದೇವಾಲಯದಲ್ಲಿ ಹಿಂದೂ ಧರ್ಮೀಯರು ಮಾತ್ರ ಕೆಲಸ ಮಾಡಬೇಕು ಎಂದು ಸರ್ಕಾರೀ ಆದೇಶ ನೀಡಲಾಗಿತ್ತು. ಹಾಗಿದ್ದರೂ ಹಲವು ಅನ್ಯಧರ್ಮೀಯರು ಕೆಲಸ ಮಾಡುತ್ತಿದ್ದಾರೆ.