ರೋಹ್ಟಕ್ (ಹರಿಯಾಣ): ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಹತ್ಯೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿಯ ಕೈಗಳಲ್ಲಿ ಕಚ್ಚಿದ ಹಾಗೂ ಗೀರಿದ ಗುರುತುಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ಮೂಲಗಳ ಪ್ರಕಾರ, ಬಂಧಿತ ಆರೋಪಿ ಸಚಿನ್ ಎಂದು ಗುರುತಿಸಲಾಗಿದ್ದು, ಹಿಮಾನಿ ತನ್ನ ಜೀವದ ರಕ್ಷಣೆಗಾಗಿ, ಆತನಿಂದ ಪಾರಾಗಲು ಕೈಗೆ ಕಚ್ಚಿರುವುದಾಗಿ ಮೇಲ್ನೋಟಕ್ಕೆ ತಿಳಿದುಬಂದಿದೆ.
ಇನ್ನೂ ಹತ್ಯೆ ಬಳಿಕ ಸೂಟ್‌ಕೇಶ್‌ನಲ್ಲಿ ಶವವನ್ನು ತುಂಬುವ ಮೊದಲು ಆಕೆಯಲ್ಲಿದ್ದ ಸರ ಹಾಗೂ ಉಂಗುರವನ್ನು ಆರೋಪಿ ತೆಗೆದಿದ್ದಾನೆ.
ಆರೋಪಿಯ ಬಳಿ ಕೆಲವು ಆಭರಣಗಳ ಚೀಟಿಯೂ ಪತ್ತೆಯಾಗಿದ್ದು, ಹಿಮಾನಿ ಚಿನ್ನಾಭರಣಗಳನ್ನು ಇಟ್ಟುಕೊಂಡು ಆತ ಸಾಲ ಪಡೆದಿದ್ದಾನೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋಮವಾರ ಒಬ್ಬ ಆರೋಪಿಯನ್ನು ಬಂಧಿಸಿದ್ದರು.
ಬಂಧನದ ನಂತರ ಸೋಮವಾರ ಮೃತನ ಸಹೋದರ ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದರು.
ಎಎನ್‌ಐ ಜತೆ ಮಾತನಾಡಿದ ಹಿಮಾನಿ ನರ್ವಾಲ್ ಸಹೋದರ ಜತಿನ್, "ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ, ಇಂದು ನಾವು ಅವಳನ್ನು (ಹಿಮಾನಿ ನರ್ವಾಲ್) ಶವಸಂಸ್ಕಾರ ಮಾಡುತ್ತೇವೆ. ಮಾಧ್ಯಮಗಳಲ್ಲಿ ಸಾಕಷ್ಟು ವದಂತಿಗಳು ಹರಡುತ್ತಿವೆ. ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹರಡದಂತೆ ನಾನು ಮಾಧ್ಯಮಗಳಲ್ಲಿ ವಿನಂತಿಸುತ್ತೇನೆ. ನಮಗೆ ನ್ಯಾಯ ಸಿಗುತ್ತದೆ. ಆರೋಪಿಗಳು ಯಾರೆಂದು ನಮಗೆ ಇನ್ನೂ ತಿಳಿದಿಲ್ಲ; ಪೊಲೀಸರು ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಆರೋಪಿಗೆ ಮರಣದಂಡನೆ ಬೇಕು" ಎಂದು ಹೇಳಿದರು.