Publish Date: Mon, 30 Oct 2023 (10:58 IST)
Updated Date: Mon, 30 Oct 2023 (11:01 IST)
ವಿಶ್ವವೇ ಭಾರತದತ್ತ ಗೌರವಪೂರ್ಣವಾಗಿ ನೋಡುತ್ತಿದೆ. ಇದು ನನ್ನಿಂದಾಗಿ ಸಾಧ್ಯವಾಗಿಲ್ಲ. ದೇಶದ 125 ಕೋಟಿ ಜನತೆ ಕೇಂದ್ರದಲ್ಲಿ ಸಶಕ್ತ ಮತ್ತು ಸ್ಥಿರ ಸರಕಾರವನ್ನು ಆಯ್ಕೆ ಮಾಡಿದ್ದರಿಂದ ಇಂದು ನಮ್ಮನ್ನು ವಿಶ್ವವೇ ಗೌರವಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಮೋದಿಯಿಂದ ದೇಶದ ಪ್ರತಿಷ್ಠೆ ಹೆಚ್ಚಾಗುತ್ತಿಲ್ಲ. 125 ಕೋಟಿ ಜನತೆ ಸ್ಥಿರ ಸರಕಾರ ಆಯ್ಕೆ ಮಾಡಿದ್ದರಿಂದ ಭಾರತದ ಪ್ರತಿಷ್ಠೆ ಹೆಚ್ಚಾಗುತ್ತಿದೆ. ಇದು ಜನತೆಯ ಮ್ಯಾಜಿಕ್ ಹೊರತು ಮೋದಿಯ ಮ್ಯಾಜಿಕ್ ಅಲ್ಲ. ವಿಶ್ವದಲ್ಲಿ ಖ್ಯಾತಿ ಪಡೆಯಬೇಕು ಎಂದು ಬಯಸಿದಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.
ರಾಜ್ಯದ ಜನತೆ ಬದಲಾವಣೆ ಬಯಸಿದ್ರೆ ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದು ಹರಿಯಾಣಾ ಪ್ರಚಾರ ಅಂಗವಾಗಿ ಅಯೋಜಿಸಿದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಬಹುಮತ ದೊರೆತಲ್ಲಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮೊದಲನೆಯದು ಕಾಂಗ್ರೆಸ್ ಮುಕ್ತವಾಗಬೇಕು. ಎರಡನೆಯದು ಬಹುಮತದೊಂದಿಗೆ ಸ್ಥಿರ ಸರಕಾರ ರಚನೆಯಾಗಬೇಕು. ಮೂರನೆಯದು ಬಿಜೆಪಿ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಲ್ಲಿ ರಾಜ್ಯ ಅಭಿವೃದ್ಧಿಯಾಗುತ್ತದೆ ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದ್ದಾರೆ.