ಬಿಜೆಪಿ ಸರಕಾರ ಜನರಿಗೆ ಬರಿ ನಕಲಿ ಕನಸುಗಳನ್ನು ತೋರಿಸಿ ವಂಚಿಸುತ್ತಿದೆ. 100 ದಿನಗಳಲ್ಲಿ ಕಪ್ಪು ಹಣ ವಾಪಸ್ ತರುತ್ತೇವೆ ಎಂದು ದೇಶದ ಜನತೆಯ ಮುಂದೆ ಪ್ರಮಾಣ ಮಾಡಿದ್ದರು. ಆದರೆ, ಇಲ್ಲಿಯವರೆಗೆ ಯಾವುದೇ ಕನಸು ಸಾಕಾರಗೊಳಿಸಿಲ್ಲ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ತಿರುಗೇಟು ನೀಡಿದ್ದಾರೆ.
ಕೇಂದ್ರದಲ್ಲಿ ಗದ್ದುಗೆ ಹಿಡಿದಿರುವ ಮೋದಿ ನೇತೃತ್ವದ ಸರಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ ಅಶ್ವಾಸನೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಹೆಚ್ಚು ಕೂಗಾಡುವವರು ಸತ್ಯವಂತರಲ್ಲ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ಬೆಲೆ ಏರಿಕೆ ನಿಯಂತ್ರಣವಾಗಿದೆಯಾ? ಕಪ್ಪು ಹಣ ವಾಪಸ್ ತಂದ್ರಾ? ಚುನಾವಣೆಯಲ್ಲಿ ನೀಡಿದ ಅಶ್ವಾಸನೆಗಳು ಅಶ್ವಾಸನೆಗಳಾಗಿಯೇ ಉಳಿದಿವೆ. ಅಧಿಕಾರಕ್ಕಾಗಿ ಯಾರ ಜತೆ ಬೇಕಾದರೂ ಕೈಜೋಡಿಸುತ್ತಾರೆ. ಖಾಸಿ ಬಿಂದಿಗೆಯಲ್ಲಿ ಸದ್ದು ಮಾಡುವ ತರ ಇವರ ಅಶ್ವಾಸನೆಗಳಿವೆ ಎಂದು ಲೇವಡಿ ಮಾಡಿದರು.
10 ವರ್ಷ ಹರಿಯಾಣಾ ಜನರ ಸೇವೆ ಮಾಡಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದೀಗ ಮೋದಿ ನೇತೃತ್ವದ ಬಿಜೆಪಿ ಸರಕಾರ ಯೋಜನೆಗಳ ಹೆಸರುಗಳನ್ನು ಬದಲಿಸಿ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಬಿಂಬಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಕಿಡಿಕಾರಿದ್ದಾರೆ.