ನವದೆಹಲಿ : ಕರ್ನಾಟಕ ಸಿಎಂ ಕದನ ಅಂತ್ಯವಾಗಿದ್ದು 5ನೇ ದಿನ ಸಿಎಂ ಬಿಕ್ಕಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ತೆರೆ ಎಳೆದಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಮನವೊಲಿಕೆಯ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಡಿಕೆ ಶಿವಕುಮಾರ್ ಒಪ್ಪಿಗೆ ನೀಡಿದ್ದಾರೆ.
ಬುಧವಾರ ದಿನಪೂರ್ತಿ ಡಿಕೆಶಿ ಜೊತೆ ಮಾತುಕತೆ ನಡೆಸಿದರೂ ಯಾವುದೇ ಕಾರಣಕ್ಕೂ ತಮ್ಮ ಬೇಡಿಕೆಯಿಂದ ಹಿಂದಕ್ಕೆ ಸರಿದಿರಲಿಲ್ಲ. ತಡರಾತ್ರಿ ಶಿಮ್ಲಾದಲ್ಲಿರುವ ಸೋನಿಯಾ ಗಾಂಧಿ ದೂರವಾಣಿ ಮೂಲಕವೇ ಡಿಕೆಶಿಯನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದು ಕುರ್ಚಿ ಕಾದಾಟಕ್ಕೆ ಬ್ರೇಕ್ ಬಿದ್ದಿದೆ.
ಮೊದಲ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಲಿದ್ದರೆ ಎರಡನೇ ಅವಧಿಗೆ ಡಿ.ಕೆ ಶಿವಕುಮಾರ್ ಸಿಎಂ ಪಟ್ಟ ಅಲಂಕರಿಸಲಿದ್ದಾರೆ. ಡಿಕೆ ಶಿವಕುಮಾರ್ ಡಿಸಿಎಂ, ಎರಡು ಪ್ರಬಲ ಖಾತೆಯನ್ನು ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿದೆ. ಅಷ್ಟೇ ಅಲ್ಲದೇ ಲೋಕಸಭಾ ಚುನಾವಣೆ ಮುಗಿಯುವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇಂದು ಸಂಜೆ 7 ಗಂಟೆಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಸಿಎಂ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ.