ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಅಮಾಯಕರ ಜೀವಹಾನಿಯ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ದೃಢವಾದ ಕ್ರಮದೊಂದಿಗೆ ಪ್ರತಿಕ್ರಿಯಿಸುತ್ತದೆ ಮತ್ತು ಭಯೋತ್ಪಾದನೆ ವಿರುದ್ಧ ಭಾರತದ ರಾಜಿಯಿಲ್ಲದ ನಿಲುವನ್ನು ತೆಗೆದುಕೊಳ್ಳುತ್ತದೆ ಎಂದು ಕೌಂಟರ್ ನೀಡಿದರು.
ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ನಾನು ಭಯೋತ್ಪಾದನೆ ವಿರುದ್ಧ ಭಾರತದ ಸಂಕಲ್ಪವನ್ನು ಪುನರಾವರ್ತಿಸಲು ಬಯಸುತ್ತೇನೆ. ಉಗ್ರರ ಬಗ್ಗೆ ಯಾವುದೇ ರಾಜಿಯಿಲ್ಲದ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದರು.
ಸರ್ಕಾರವು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ನಾವು ಈ ಕೃತ್ಯದ ಅಪರಾಧಿಗಳನ್ನು ಮಾತ್ರವಲ್ಲದೆ ತೆರೆಮರೆಯಲ್ಲಿರುವ ಸಹಕರಿಸಿದವರ ವಿರುದ್ಧವೂ ಶೀಘ್ರದಲ್ಲೇ ಗಟ್ಟಿಯಾದ ಮತ್ತು ಸ್ಪಷ್ಟವಾದ ತಿರುಗೇಟನ್ನು ನೀಡುತ್ತೇವೆ ಎಂದರು.
ಪಹಲ್ಗಾಮ್‌ನಲ್ಲಿ ನಡೆದ ಹೇಡಿತನದ ಕೃತ್ಯದಲ್ಲಿ ನಾವು ಅನೇಕ ಅಮಾಯಕರ ಜೀವಗಳನ್ನು ಕಳೆದುಕೊಂಡಿದ್ದೇವೆ. ಇದರಿಂದ ನಾವು ತೀವ್ರವಾಗಿ ನೊಂದಿದ್ದೇವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಸಿಂಗ್ ಅವರು ಜೀವಹಾನಿಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಅವರು ಎನ್‌ಎಸ್‌ಎ ಅಜಿತ್ ದೋವಲ್, ವಾಯುಪಡೆಯ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆಯ ಅಧ್ಯಕ್ಷತೆ ವಹಿಸಿ, ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು ಚರ್ಚಿಸಿದರು.