Publish Date: Sat, 23 Oct 2021 (08:53 IST)
Updated Date: Sat, 23 Oct 2021 (08:55 IST)
ಜೈಪುರ : ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಖಾಸಗಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಯನ್ನು ಶಿಕ್ಷಕರೊಬ್ಬರು ಥಳಿಸಿ ಕೊಲೆ ಮಾಡಿದ್ದಾರೆ.
ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಮನಬಂದಂತೆ ಹೊಡೆದು, ವಿದ್ಯಾರ್ಥಿಯ ಸಾವಿಗೆ ಕಾರಣರಾದ ಆರೋಪಿ ಶಿಕ್ಷಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಸ್ಥಾನದ ಶಿಕ್ಷಣ ಸಚಿವ ಗೋವಿಂದ ಸಿಂಗ್ ದೋಟಾಸ್ರ ಈ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೇ, ಈ ಘಟನೆ ನಡೆದ ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಈ ಘಟನೆಯ ಬಗ್ಗೆ ಮಾಹಿತಿ ನೀಡಿರುವ ಸಲಸಾರ್ ಪೊಲೀಸ್ ಠಾಣೆಯ ಎಸ್‌ಎಚ್ಒ ಸಂದೀಪ್ ವಿಷ್ಣೋಯ್, 13 ವರ್ಷದ ಗಣೇಶ್ ಖಾಸಗಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿದ್ದು, ಹೋಂ ವರ್ಕ್ ಪೂರ್ಣಗೊಳಿಸದ ಕಾರಣ ಶಿಕ್ಷಕರು ಕೋಲಿನಿಂದ ಥಳಿಸಿದ್ದಾರೆ. ಆತ ಬೇಡಿಕೊಂಡರೂ ಬಿಡದ ಶಿಕ್ಷಕರು ಮನಸಿಗೆ ಬಂದಂತೆ ಹೊಡೆದಿದ್ದರಿಂದ ತೀವ್ರವಾಗಿ ಗಾಯಗೊಂಡ ಆ ಬಾಲಕ ಸಾವನ್ನಪ್ಪಿದ್ದಾನೆ ಎಂದಿದ್ದಾರೆ.