Publish Date: Sat, 24 Aug 2024 (15:35 IST)
Updated Date: Sat, 24 Aug 2024 (15:37 IST)
ಮುಂಬೈ: ಮನೆಗೆಲಸ ಮಾಡಿಲ್ಲವೆಂದು ಮಲತಾಯಿ ಇಬ್ಬರು ಮಕ್ಕಳಿಗೆ ಕೊಡಬಾರದ ಶಿಕ್ಷೆ ನೀಡಿ ಚಿತ್ರಹಿಂಸೆ ನೀಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಈ ಸಂಬಂಧ ಈಗ ಮಹಿಳೆ ಮೇಲೆ ಪತಿಯೇ ದೂರು ನೀಡಿದ್ದಾನೆ.
ಮೊದಲ ಪತ್ನಿಯಿಂದ ಪತಿಗೆ 7 ಮತ್ತು 8 ವರ್ಷದ ಇಬ್ಬರು ಗಂಡು ಮಕ್ಕಳಿದ್ದರು. ಆದರೆ ಆತ ಕೊರಿಯರ್ ಸರ್ವಿಸ್ ವೃತ್ತಿಯಲ್ಲಿದ್ದ. ಹೀಗಾಗಿ ಮಕ್ಕಳನ್ನು ನೋಡುವ ಸಲುವಾಗಿ ಕಳೆದ ವರ್ಷವಷ್ಟೇ ಮತ್ತೊಂದು ಮದುವೆಯಾಗಿದ್ದ. ಆತ ಮನೆಯಲ್ಲಿರುತ್ತಿದ್ದುದೇ ಅಪರೂಪ.
ಆದರೆ ಇತ್ತೀಚೆಗೆ ಮಕ್ಕಳ ದೇಹದಲ್ಲಿ ಗಾಯದ ಗುರುತುಗಳನ್ನು ನೋಡಿ ಸಂಶಯಗೊಂಡು ವಿಚಾರಿಸಿದಾಗ ಮಲತಾಯಿಯ ಕೃತ್ಯ ಬಯಲಾಗಿತ್ತು. ಚಿಕ್ಕಮ್ಮ ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಮನೆ ಒರೆಸುವುದು ಇತ್ಯಾದಿ ಮನೆಗೆಲಸ ಮಾಡಿಸುತ್ತಿದ್ದಳು. ಒಂದು ವೇಳೆ ಮಾಡದೇ ಇದ್ದರೆ ಚಾಕು ಬಿಸಿ ಮಾಡಿ ದೇಹದ ಮೇಲೆಲ್ಲಾ ಬರೆ ಹಾಕುತ್ತಿದ್ದಳು ಎಂದು ಬಾಯ್ಬಿಟ್ಟಿದ್ದಾರೆ.
ಮಕ್ಕಳ ಖಾಸಗಿ ಅಂಗಾಂಗಳನ್ನೂ ಪಾಪಿ ಮಹಿಳೆ ಸುಟ್ಟು ಹಾಕಿದ್ದಳು. ವಿಷಯ ತಿಳಿದ ತಕ್ಷಣವೇ ತಂದೆ ಪೊಲೀಸರಿಗೆ ತನ್ನ ಎರಡನೇ ಪತ್ನಿಯ ವಿರುದ್ಧ ದೂರು ನೀಡಿದ್ದಾನೆ. ಇದೀಗ ಪೊಲೀಸರು ಮಕ್ಕಳ ಮೇಲೆ ದೌರ್ಜನ್ಯವೆಸಗಿದ ಆರೋಪದಲ್ಲಿ ಮಹಿಳೆಯ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.