ಬೆಂಗಳೂರು: ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿದ್ದ ಭೀಮ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿ ಸದ್ದು ಮಾಡಿತ್ತು. ಈ ಸಿನಿಮಾದಿಂದ ಪ್ರಭಾವಿತರಾಗಿ ವಕೀಲರೊಬ್ಬರು ಈಗ ಡ್ರಗ್ಸ್ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಭೀಮ ಸಿನಿಮಾದಲ್ಲಿ ಗಲ್ಲಿ ಗಲ್ಲಿಗಳಲ್ಲಿ ಡ್ರಗ್ಸ್ ದಂಧೆ ಹೇಗೆ ನಡೆಯುತ್ತದೆ, ಅಮಾಯಕ ಹುಡುಗರು ಇದಕ್ಕೆ ಹೇಗೆ ಬಲಿಯಾಗುತ್ತಿದ್ದಾರೆ ಎಂಬ ಅಂಶಗಳನ್ನು ತೋರಿಸಲಾಗಿತ್ತು. ಇದು ಇಷ್ಟಕ್ಕೇ ನಿಂತಿರಲಿಲ್ಲ. ದುನಿಯಾ ವಿಜಿ ಹಲವೆಡೆ ಡ್ರಗ್ಸ್ ದಂಧೆ ಹೇಗೆ ನಡೆಯುತ್ತಿದೆ ಎಂಬುದನ್ನು ಸೋಷಿಯಲ್ ಮೀಡಿಯಾ ಮೂಲಕವೂ ಸಂಬಂಧಪಟ್ಟವರ ಗಮನಕ್ಕೆ ತರಲು ಪ್ರಯತ್ನಿಸಿದ್ದರು.
ಅವರ ಈ ಶ್ರಮಕ್ಕೆ ಈಗ ಫಲ ಸಿಗುವ ನಿರೀಕ್ಷೆಯಿದೆ. ಭೀಮ ಸಿನಿಮಾ ನೋಡಿ ವಕೀಲ ನಾರಾಯಣಸ್ವಾಮಿ ಎಂಬವರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದು ಡ್ರಗ್ಸ್ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಸಿನಿಮಾದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಭೀಮಾ ಸಿನಿಮಾದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಸಾಕಷ್ಟು ಮಾಹಿತಿ ನೀಡಲಾಗಿದೆ. ಅಲ್ಲದೆ ದುನಿಯಾ ವಿಜಯ್ ಅವರು ಸಾಕಷ್ಟು ಕಡೆ ಡ್ರಗ್ಸ್ ಮಾರಾಟವಾಗುತ್ತಿರುವುದರ ಬಗ್ಗೆ ಖುದ್ದಾಗಿ ತಾವೇ ತೆರಳಿ ಬೆಳಕಿಗೆ ತಂದಿದ್ದಾರೆ. ಇವುಗಳ ಬಗ್ಗೆ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ವಕೀಲ ನಾರಾಯಣಸ್ವಾಮಿ ದೂರಿನಲ್ಲಿ ತಿಳಿಸಿದ್ದಾರೆ.