ಹೈದರಾಬಾದ್: ಯುಪಿಎ ಸರ್ಕಾರದ ಅವಧಿಯಲ್ಲಿ ಉದಯವಾದ ತೆಲಂಗಾಣ ರಾಜ್ಯಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ತೆಲಂಗಾಣದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಸೋನಿಯಾ ‘ಒಬ್ಬ ಅಮ್ಮನಾಗಿ ಅದೆಷ್ಟೋ ದಿನಗಳ ನಂತರ ಮಕ್ಕಳನ್ನು ನೋಡಿದ ಅನುಭವ ನನಗಾಗುತ್ತಿದೆ. ತೆಲಂಗಾಣ ರಾಜ್ಯ ನಿರ್ಮಾಣವಾಗುವಾಗ ಎಷ್ಟು ಕಷ್ಟ ಅನುಭವಿಸಿದ್ದೆ ಎಂದು ನನಗೆ ಗೊತ್ತು. ಆದರೆ ಟಿಆರ್ ಎಸ್ ಪಕ್ಷ ಇಲ್ಲಿನ ಜನರ ನಿರೀಕ್ಷೆಗಳು, ಕನಸುಗಳನ್ನು ನುಚ್ಚುನೂರು ಮಾಡಿದೆ. ಹೀಗಾಗಿ ಟಿಆರ್ ಎಸ್ ಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಿ’ ಎಂದು ಸೋನಿಯಾ ಕರೆ ಕೊಟ್ಟಿದ್ದಾರೆ.
‘ತೆಲಂಗಾಣ ಮತ್ತು ಆಂಧ್ರವನ್ನು ವಿಭಜಿಸಿ ಪ್ರತ್ಯೇಕ ರಾಜ್ಯವಾಗಿ ಘೋಷಿಸುವ ನಿರ್ಧಾರ ಕೈಗೊಳ್ಳಲು ನನಗೆ ತುಂಬಾ ಕಷ್ಟವಾಯಿತು. ಆದರೆ ನನ್ನ ಸಹೋದ್ಯೋಗಿಗಳು, ಡಾ. ಮನಮೋಹನ್ ಸಿಂಗ್, ರಾಹುಲ್ ಗಾಂಧಿ ನನಗೆ ಬೆಂಬಲವಾಗಿದ್ದರು. ಇಲ್ಲಿನ ಜನರು ಪ್ರತ್ಯೇಕ ರಾಜ್ಯಕ್ಕಾಗಿ ಮಾಡುತ್ತಿರುವ ಹೋರಾಟದ ತೀವ್ರತೆ ನೋಡಿ ಆ ನಿರ್ಧಾರಕ್ಕೆ ಒಪ್ಪಿಗೆ ಕೊಡಬೇಕಾಯಿತು’ ಎಂದು ಸೋನಿಯಾ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.