ಬೆಂಗಳೂರು : ಚಂದ್ರನ ದಕ್ಷಿಣ ಧ್ರುವಕ್ಕೆ ಲ್ಯಾಂಡರ್ ವಿಕ್ರಮ್ನ್ನು ಯಶಸ್ವಿಯಾಗಿ ಇಳಿಸಿದ ಇಸ್ರೋ, ಇದೀಗ ಸೂರ್ಯನ ಅಧ್ಯಯನಕ್ಕೆ ಸಜ್ಜಾಗಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಸೋಲಾರ್ ಮಿಷನ್ ಆದಿತ್ಯ ಇದೇ ಸೆಪ್ಟೆಂಬರ್ಗೆ ಲಾಂಚ್ ಆಗಲು ಸಿದ್ಧವಾಗುತ್ತಿದೆ ಎಂದು ತಿಳಿಸಿದ್ದಾರೆ.ಚಂದ್ರಯಾನ-3 ಯಶಸ್ವಿಯಾದ ಬಗ್ಗೆ ಅವರು ಮಾತನಾಡಿದ್ದಾರೆ. ಈ ವೇಳೆ, ಮಿಷನ್ ಆದಿತ್ಯ ಕೆಲಸಗಳು ಪ್ರಗತಿಯಲ್ಲಿವೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಲಾಂಚ್ಗೆ ಸಿದ್ಧವಾಗಲಿದೆ.
2025 ರ ವೇಳೆಗೆ ಬಾಹ್ಯಾಕಾಶಕ್ಕೆ ಮಾನವಸಹಿತ ಮಿಷನ್ ಕೈಗೊಳ್ಳಲು ಯೋಜಿಸಿದ್ದು, ಕ್ರ್ಯೂ ಮಾಡ್ಯೂಲ್ (ಗಗನಯಾತ್ರಿಗಳಿರುವ ಘಟಕ) ಸಾಮರ್ಥ್ಯ ಪರೀಕ್ಷಾ ಕಾರ್ಯಾಚರಣೆಗಳನ್ನು ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ತಿಂಗಳಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ದಕ್ಷಿಣ ಧ್ರುವವು ಸೂರ್ಯನಿಂದ ಕಡಿಮೆ ಪ್ರಕಾಶಮಾನವನ್ನು ಪಡೆಯುತ್ತದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಗಾಗಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿಗಳು ದಕ್ಷಿಣ ಧ್ರುವದ ಕುರಿತಾಗಿ ಆಸಕ್ತಿ ತೋರಿಸಿದ್ದಾರೆ. ಮನುಷ್ಯ ಚಂದ್ರನ ಮೇಲೆ ವಸಾಹತುಗಳನ್ನು ಸ್ಥಾಪಿಸುವುದು ಮತ್ತು ಅದರ ಆಚೆಗೆ ಬೆಳೆಯುವುದು ಅದರ ಉದ್ದೇಶವಾಗಿದೆ. ಚಂದ್ರಯಾನ-3 ಮಿಷನ್ನ ಯಶಸ್ಸಿಗೆ ಕಾರಣರಾದ ಎಲ್ಲಾ ವಿಜ್ಞಾನಿಗಳಿಗೆ ಇದು ಸಂತೋಷದ ವಿಚಾರವಾಗಿದೆ ಎಂದು ಅವರು ಹೇಳಿದ್ದಾರೆ.