ಫ್ಲೋರಿಡಾ: ಯಶಸ್ವೀ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಯಾತ್ರೆ ಮುಗಿಸಿ ಶುಭಾಂಶು ಶುಕ್ಲ ಸೇರಿದಂತೆ ಎಲ್ಲಾ ನಾಲ್ವರು ಗಗನಯಾತ್ರಿಗಳು ಭೂಮಿಗೆ ಬಂದಿಳಿದಿದ್ದಾರೆ. ಶುಭಾಂಶು ಭೂಮಿಗೆ ಬಂದಿಳಿಯುತ್ತಿದ್ದಂತೇ ಅವರ ತಾಯಿ ಗಳ ಗಳನೇ ಕಣ್ಣೀರು ಸುರಿಸಿದ ದೃಶ್ಯ ಈಗ ವೈರಲ್ ಆಗಿದೆ.
18 ದಿನಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ಶುಭಾಂಶು ಶುಕ್ಲ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಇಂದು ಭಾರತೀಯ ಕಾಲಮಾನ ಪ್ರಕಾರ 3 ಗಂಟೆಗೆ ನೌಕೆ ಯಶಸ್ವಿಯಾಗಿ ಕ್ಯಾಲಿಫೋರ್ನಿಯಾದ ಕರಾವಳಿಗೆ ಬಂದಿಳಿದಿದೆ.
ಈ ದೃಶ್ಯವನ್ನು ಉತ್ತರ ಪ್ರದೇಶದಲ್ಲಿ ಸ್ಪೇಸ್ ಸೆಂಟರ್ ನಲ್ಲಿ ಶುಭಾಂಶು ಶುಕ್ಲ ಪೋಷಕರು, ಕುಟುಂಬಸ್ಥರು ಲೈವ್ ವೀಕ್ಷಿಸಿದ್ದಾರೆ. ಮಗ ಬರುವುದನ್ನೇ ಕಾತುರದಿಂದ ಕಾದು ಕುಳಿತು ನೋಡುತ್ತಿದ್ದ ದಂಪತಿ ನೌಕೆ ಯಶಸ್ವಿಯಾಗಿ ಬಂದಿಳಿಯುತ್ತಿದ್ದಂತೇ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಅದರಲ್ಲೂ ಶುಭಾಂಶು ತಾಯಿಯಂತೂ ಸಂತೋಷದಿಂದ ಗಳ ಗಳನೆ ಪತಿಯ ಹೆಗಲಿಗೊರಗಿ ಅತ್ತಿದ್ದಾರೆ. ಬಾಹ್ಯಾಕಾಶಕ್ಕೆ ಹೋಗಿ ಪ್ರಯೋಗ ನಡೆಸಿ ಯಶಸ್ವಿಯಾಗಿ ಬಂದಿಳಿಯುವುದೇ ದೊಡ್ಡ ಸಾಹಸ. ಅದರಲ್ಲೂ ಶುಭಾಂಶು ಈ ಸಾಧನೆ ಮಾಡಿದ ಕೇವಲ ಎರಡನೇ ಭಾರತೀಯ. ಹೀಗಾಗಿ ಸಹಜವಾಗಿಯೇ ಪೋಷಕರ ಮುಖದಲ್ಲಿ ಸಂಭ್ರಮ ಎದ್ದು ಕಾಣುತ್ತಿತ್ತು.