ಮುಂಬೈ: ಬೆಂಗಳೂರಿನ ಶಿವಾಜಿನಗರದ ಮೆಟ್ರೊ ನಿಲ್ದಾಣದ ಹೆಸರನ್ನು ಸೇಂಟ್ ಮೇರಿ ಎಂದು ಮರುನಾಮಕರಣ ಮಾಡುವುದನ್ನು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂದ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಈಚೆಗೆ ಶಿವಾಜಿನಗರದಲ್ಲಿರುವ ಸೇಂಟ್ ಮೇರಿಸ್ ಬೆಸಿಲಿಕಾದ ವಾರ್ಷಿಕ ಹಬ್ಬದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ ಅವರಲ್ಲಿ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರಿಡಬೇಕು ಎಂದು ಮನವಿ ಮಾಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಮರುನಾಮಕರಣದ ಬಗ್ಗೆ ಸರ್ಕಾರ ಪರಿಗಣಿಸುತ್ತದೆ ಎಂದು ತಿಳಿಸಿದ್ದರು.
ಸಮುದಾಯವು ಮನವಿ ಮಾಡಿದಾಗ ಅದಕ್ಕೆ ಪ್ರತಿಕ್ರಿಯಿಸಿವುದರಲ್ಲಿ ತಪ್ಪೇನು ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡಾ ಹೇಳಿದ್ದರು.
ಈ ಬಗ್ಗೆ ಇಲ್ಲಿ ಪ್ರತಿಕ್ರಿಯಿಸಿರುವ ಫಡಣವೀಸ್, ಶಿವಾಜಿನಗರ ಮೆಟ್ರೋ ನಿಲ್ದಾಣದ ಹೆಸರನ್ನು ಮರುನಾಮಕರಣ ಮಾಡುವುದನ್ನು ನಾನು ಖಂಡಿಸುತ್ತೇನೆ. ಇದು ಛತ್ರಪತಿ ಶಿವಾಜಿಗೆ ಮಾಡುವ ಅವಮಾನವಾಗಿದೆ. ಕಾಂಗ್ರೆಸ್ ನೆಹರೂ ಕಾಲದಿಂದಲೂ ಶಿವಾಜಿಗೆ ಅವಮಾನ ಮಾಡುವ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದೆ ಎಂದು ಹೇಳಿದ್ದಾರೆ.