ನವದೆಹಲಿ: ಇಂದು ಲೋಕಸಭೆ ಕಲಾಪದಲ್ಲಿ ಆಪರೇಷನ್ ಸಿಂಧೂರ್ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿವರಣೆ ನೀಡುತ್ತಿದ್ದರೆ ಕಾಂಗ್ರೆಸ್ ಸದಸ್ಯರು ರಾಹುಲ್ ಗಾಂಧಿ ನೇತೃತ್ವದಲ್ಲಿ ಮಾತಿನ ಜಟಾಪಟಿ ನಡೆಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಪಾಕಿಸ್ತಾನ ನಮ್ಮ ದಾಳಿಗೆ ಬೆದರಿ ಕದನ ವಿರಾಮ ಮಾಡೋಣ ಎಂದು ದಯನೀಯವಾಗಿ ಬೇಡಿಕೊಂಡಿತು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಅದಕ್ಕೆ ರಾಹುಲ್ ಗಾಂಧಿ ಯಾಕೆ ಕದನ ವಿರಾಮಕ್ಕೆ ಒಪ್ಪಿಕೊಂಡ್ರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಇತರೆ ಕಾಂಗ್ರೆಸ್ ಸದಸ್ಯರೂ ಧ್ವನಿಗೂಡಿಸಿದ್ದಾರೆ. ಇವರ ಮಾತಿನ ಜಟಾಪಟಿಯ ವಿಡಿಯೋ ವೈರಲ್ ಆಗಿದೆ.
ಇನ್ನು, ಆಪರೇಷನ್ ಸಿಂಧೂರ್ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿತ್ತು. ಇದಕ್ಕೆ ಕೇಂದ್ರ ಸರ್ಕಾರವೂ ಒಪ್ಪಿಕೊಂಡಿದ್ದು ಸತತ 16 ಗಂಟೆಗಳ ಕಾಲ ಚರ್ಚೆ ನಡೆಸಲು ಮುಂದೆ ಬಂದಿದೆ. ಈ ಕಲಾಪ ಈಗಷ್ಟೇ ಆರಂಭವಾಗಿದ್ದು ಮುಂದಿನ ಹಂತದಲ್ಲಿ ವಿಪಕ್ಷ ಸದಸ್ಯರಿಂದ ಮತ್ತಷ್ಟು ಗದ್ದಲವೇರ್ಪಡವುದು ಖಚಿತವಾಗಿದೆ.
ಇನ್ನು, ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ನೀಡಿದ ರಾಜನಾಥ್ ಸಿಂಗ್, ನಾವು ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುಗಳಾಗಿದ್ದೇವೆ ಎಂದು ತೋರಿಸಲೇ ಈ ದಾಳಿ ನಡೆಸಿದೆವು. ನಮ್ಮ ಮೂರೂ ಸೇನಾ ದಳಗಳು ಈ ಆಪರೇಷನ್ ನಲ್ಲಿ ಭಾಗಿಯಾಗಿವೆ. ಪಾಕಿಸ್ತಾನದ ವಿಮಾನ ನಿಲ್ದಾಣ, ಏರ್ ಡಿಫೆನ್ಸ್ ಸಿಸ್ಟಂಗಳನ್ನು ಟಾರ್ಗೆಟ್ ಮಾಡಿ ಧ್ವಂಸ ಮಾಡಿದ್ದೇವೆ ಎಂದು ರಾಜನಾಥ್ ಸಿಂಗ್ ವಿವರಿಸಿದ್ದಾರೆ. ಈ ವೇಳೆ ಪ್ರತಿಪಕ್ಷಗಳ ಗದ್ದಲ ಜೋರಾಗಿತ್ತು.