ರಾಜಸ್ಥಾನ: ಜಲಾವರ್ ಜಿಲ್ಲೆಯಲ್ಲಿ ಶುಕ್ರವಾರ ಸರ್ಕಾರಿ ಶಾಲೆಯ ಕಟ್ಟಡ ಕುಸಿದು ಏಳು ಮಕ್ಕಳು ಸಾವನ್ನಪ್ಪಿ, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮನೋಹರ ಠಾಣಾ ವ್ಯಾಪ್ತಿಯ ಪಿಪ್ಲೋಡಿ ಸರ್ಕಾರಿ ಶಾಲೆಯಲ್ಲಿ ಬೆಳಗ್ಗೆ 8.30ರ ಸುಮಾರಿಗೆ ಘಟನೆ ನಡೆದಿದೆ. ಒಂದೇ ಅಂತಸ್ತಿನ ಕಟ್ಟಡದ ಮೇಲ್ಛಾವಣಿ ಕುಸಿದಾಗ ಆವರಣದಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿಗಳಲ್ಲದೆ ಸುಮಾರು 60 ಮಕ್ಕಳು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು, ಈ ಬಗ್ಗೆ ಈ ಹಿಂದೆ ಹಲವಾರು ದೂರುಗಳು ಬಂದಿದ್ದವು. ಶಾಲೆಯು 8 ನೇ ತರಗತಿಯವರೆಗೆ ಶಿಕ್ಷಣವನ್ನು ನೀಡುತ್ತದೆ.
ರಕ್ಷಣಾ ಕಾರ್ಯಾಚರಣೆ ಮುಗಿದಿದ್ದು, ಘಟನೆಯಲ್ಲಿ ಆರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ರಾಜಸ್ಥಾನ ಶಿಕ್ಷಣ ಕಾರ್ಯದರ್ಶಿ ಕೃಷ್ಣ ಕುನಾಲ್ ತಿಳಿಸಿದ್ದಾರೆ.
ಎಲ್ಲಾ ಮಕ್ಕಳು ಎಂಟರಿಂದ 11 ವರ್ಷದೊಳಗಿನವರು. ಇಬ್ಬರು ಮಕ್ಕಳನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಛಾವಣಿಯು ಹಠಾತ್ತನೆ ಕುಸಿದಿದೆ.