Daily Horoscope

Select Your Language

Notifications

webdunia
webdunia
webdunia
webdunia

ಬ್ಯಾಟ್ ಮ್ಯಾನ್ ಸೂಪರ್ ಹೀರೋ ಆಗಿ ಬದಲಾದ ರಾಹುಲ್ ಗಾಂಧಿ: ದೆಹಲಿಯಲ್ಲಿ ಪೋಸ್ಟರ್ ವೈರಲ್

Rahul Gandhi poster
Photo Credit: X
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿಶಿಷ್ಟ ಶೈಲಿಯ ಪೋಸ್ಟರ್‌ಗಳು ಸಖತ್ ವೈರಲ್ ಆಗುತ್ತಿವೆ. ನವದೆಹಲಿಯ ಕೋಟ್ಲಾ ರಸ್ತೆಯಲ್ಲಿರುವ ಕಾಂಗ್ರೇಸ್ ಪ್ರಧಾನ ಕಚೇರಿ ಇಂದಿರಾ ಭವನ ಮತ್ತು ರೈಸಿನಾ ರಸ್ತೆಯಲ್ಲಿರುವ ಯೂತ್ ಕಾಂಗ್ರೆಸ್ ಕಚೇರಿಯ ಹೊರಭಾಗದಲ್ಲಿ ರಾಹುಲ್ ಗಾಂಧಿ ಅವರನ್ನು ಸಾಹಸಿ ಹೀರೊ "ಬ್ಯಾಟ್‌ಮ್ಯಾನ್" ರೂಪದಲ್ಲಿ ಬಿಂಬಿಸುವ ಬ್ಯಾನರ್‌ಗಳನ್ನು ಹಾಕಲಾಗಿದೆ.

 

ಪೋಸ್ಟರ್‌ನಲ್ಲೇನಿದೆ?

ದೆಹಲಿ ಪ್ರದೇಶ ಯೂತ್ ಕಾಂಗ್ರೇಸ್ ಅಧ್ಯಕ್ಷ ಅಕ್ಷಯ್ ಲಾಕ್ರಾ ನೇತೃತ್ವದಲ್ಲಿ ಈ ಪೋಸ್ಟರ್‌ಗಳನ್ನು ಹಾಕಲಾಗಿದ್ದು, ಅದರಲ್ಲಿ ಬ್ಯಾಟ್‌ಮ್ಯಾನ್ ಚಿತ್ರದ ಜೊತೆಗೆ ರಾಹುಲ್ ಗಾಂಧಿ ಅವರ ಫೋಟೋವನ್ನು ಕಾಣಬಹುದು.
 
"ದಿ ಸೈಲೆಂಟ್ ಗಾರ್ಡಿಯನ್", "ಎ ವಾಚ್‌ಫುಲ್ ಪ್ರೊಟೆಕ್ಟರ್", "ಎಲ್‌ಒಪಿ ರಾಹುಲ್ ಗಾಂಧಿ - ದಿ ರಿಯಲ್ ಲೈಫ್ ಬ್ಯಾಟ್‌ಮ್ಯಾನ್" ಎಂಬ ಶೀರ್ಷಿಕೆಗಳನ್ನು ಈ ಪೋಸ್ಟರ್‌ನಲ್ಲಿ ಮುದ್ರಿಸಲಾಗಿದ್ದು, ಸಾರ್ವಜನಿಕರ ಹಾಗೂ ಯುವಜನರ ಗಮನ ಸೆಳೆಯುತ್ತಿದೆ.
 
ರಾಹುಲ್ ಗಾಂಧಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಯುವಜನರಿಗಾಗಿ (Gen Z) ನಡೆಸಿದ 'ಆಸ್ಕ್ ಮಿ ಎನಿಥಿಂಗ್' (Ask Me Anything) ಸಂವಾದ ಕಾರ್ಯಕ್ರಮದಲ್ಲಿ ಯುವಕನೊಬ್ಬ "ನೀವು ಬ್ಯಾಟ್‌ಮ್ಯಾನ್ ಹಾಗೂ?" ಎಂದು ತಮಾಷೆಯಾಗಿ ಪ್ರಶ್ನಿಸಿದ್ದನು. ಅದಕ್ಕೆ ಅಷ್ಟೇ ಚತುರತೆಯಿಂದ ಉತ್ತರಿಸಿದ್ದ ರಾಹುಲ್ ಗಾಂಧಿ, "ನನ್ನನ್ನು ಮತ್ತು ಬ್ಯಾಟ್‌ಮ್ಯಾನ್‌ನನ್ನು ಇದುವರೆಗೂ ಯಾರೂ ಒಂದೇ ಕೊಠಡಿಯಲ್ಲಿ ಒಟ್ಟಿಗೆ ನೋಡಿಲ್ಲ ಎಂಬುದಷ್ಟೇ ನಾನು ಹೇಳಬಲ್ಲೆ!" ಎಂದು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದರು. ಈ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿ, ಹಲವಾರು ಮೀಮ್‌ಗಳಿಗೆ ದಾರಿಯಾಗಿತ್ತು.
 
ಕಾಂಗ್ರೆಸ್ ಸಂಸದ ಪವನ್ ಖೇರಾ ಅವರು ಈ ಪೋಸ್ಟರ್‌ಗಳ ಚಿತ್ರವನ್ನು ಹಂಚಿಕೊಂಡು, "ಎಲ್ಲಾ ಸೂಪರ್‌ಹೀರೊಗಳೂ ಕ್ಯಾಪ್ ಧರಿಸುವುದಿಲ್ಲ, ಕೆಲವರು ಬಿಳಿ ಟಿ-ಷರ್ಟ್ ಧರಿಸುತ್ತಾರೆ" ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಂದೆಡೆ, ಬಿಜೆಪಿಯ ನಾಯಕರು ಈ ಪೋಸ್ಟರ್ ವಿಚಾರವಾಗಿ ಕಾಂಗ್ರೆಸ್‌ ಅನ್ನು ಲೇವಡಿ ಮಾಡಿದ್ದು, ರಾಜಕೀಯ ನಾಯಕನನ್ನು ಕಾಮಿಕ್ ಪಾತ್ರಕ್ಕೆ ಹೋಲಿಸುವುದು ಸೂಕ್ತವಲ್ಲ ಎಂದು ಟೀಕಿಸಿದ್ದಾರೆ. ಒಟ್ಟಿನಲ್ಲಿ, ಸಾಮಾಜಿಕ ಜಾಲತಾಣದ ಒಂದು ತಮಾಷೆಯ ಸಂವಾದವನ್ನು ಯೂತ್ ಕಾಂಗ್ರೆಸ್ ಈ ರೀತಿ ರಾಜಕೀಯ ಪ್ರಚಾರಕ್ಕೆ ಹಾಗೂ ಯುವಜನರನ್ನು ಆಕರ್ಷಿಸಲು ಬಳಸಿಕೊಂಡಿರುವುದು ದೆಹಲಿಯ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾನಸಿಕ ಅಸ್ವಸ್ಥನೊಬ್ಬ ಬಾಲಕಿ ಬಳಿ ಬಂದಾಗ ಎಲ್ಲರಿಗೂ ಗಾಬರಿ.. ಆದರೆ ಮುಂದಾಗಿದ್ದು ನಿಜಕ್ಕೂ ಶಾಕಿಂಗ್ video