ವಯನಾಡು: ತಂದೆಯ ಸಾವಿನ ನಂತರ ಥೆರೇಸಾ ಸಂಸ್ಥೆಯಲ್ಲಿ ಬಾತ್ ರೂಂ ತೊಳೆದು ಕಸ ಗುಡಿಸುವ ಕೆಲಸಗಳನ್ನೂ ಮಾಡುತ್ತಿದ್ದೆ ಎಂದು ವಯನಾಡು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಗಾಂಧಿ ವಾದ್ರಾ ಹೇಳಿದ್ದಾರೆ.
ವಯನಾಡು ಉಪಚುನಾವಣೆ ಪ್ರಚಾರ ಕಣದಲ್ಲಿ ಅವರು ಅಬ್ಬರದ ಭಾಷಣ ಮಾಡಿದ್ದಾರೆ. ಈ ವೇಳೆ ತನಗೂ ದಮನಿತರ ಕಷ್ಟ ಏನೆಂದು ಗೊತ್ತು ಎಂದು ಹೇಳಿಕೊಂಡಿದ್ದಾರೆ. ಪ್ರಿಯಾಂಕರನ್ನು ಶ್ರೀಮಂತಿಕೆಯಲ್ಲಿ ಬೆಳೆದವರು, ಕಷ್ಟ ಗೊತ್ತಿಲ್ಲ ಎಂದೇ ಹೇಳುತ್ತಾರೆ. ಆದರೆ ತನಗೂ ಕಷ್ಟ ಏನೆಂದು ಗೊತ್ತು ಎಂದು ಅವರು ಭಾಷಣದಲ್ಲಿ ಹೇಳಿಕೊಂಡಿದ್ದಾರೆ.
ತಂದೆ ರಾಜೀವ್ ಗಾಂಧಿ ಹತ್ಯೆ ಬಳಿಕ ನಾನೂ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದೇನೆ. ಮದರ್ ಥೆರೆಸಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಬಾತ್ ರೂಂ ತೊಳೆಯುವುದರಿಂದ ಹಿಡಿದು ಮಕ್ಕಳಿಗೆ ಇಂಗ್ಲಿಷ್ ಪಾಠ ಮಾಡುವುದರವರೆಗೆ ಎಲ್ಲಾ ಕೆಲಸ ಮಾಡಿದ್ದೆ. ಹೀಗಾಗಿ ಆಗ ನನಗೆ ತುಳಿತಕ್ಕೊಳಗಾದವರ ನೋವು ಏನೆಂದು ಅರ್ಥವಾಗಿತ್ತು ಎಂದಿದ್ದಾರೆ.
ಥೆರೆಸಾ ಸಂಸ್ಥೆಯಲ್ಲಿ ಬಾತ್ ರೂಂ ತೊಳೆಯುತ್ತಿದ್ದೆ, ಪಾತ್ರೆ ತೊಳೆಯುತ್ತಿದ್ದೆ. ಕೆಲವು ಮಕ್ಕಳಿಗೆ ಪಾಠ ಮಾಡುತ್ತಿದ್ದೆ. ನನ್ನ ತಂದೆ ಸಾವಿನ ಬಳಿಕ ಬೇಸರದಲ್ಲಿದ್ದ ನನ್ನನ್ನು ಸ್ವತಃ ಮದರ್ ಥೆರೆಸಾ ಸಹಾನುಭೂತಿಯಿಂದ ಅವರ ಸಂಸ್ಥೆಯಲ್ಲಿ ಕೆಲಸ ಮಾಡಲು ಹೇಳಿದರು. ಆಗಲೇ ನಾನು ಒಂದು ಸಮುದಾಯಕ್ಕಾಗಿ ಹೇಗೆ ಕೆಲಸ ಮಾಡಬಹುದು ಎಂದು ಕಲಿತೆ ಎಂದಿದ್ದಾರೆ.