ವಯನಾಡು: ಉಪಚುನಾವಣೆಯಲ್ಲಿ ವಯನಾಡು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿರುವ ಪ್ರಿಯಾಂಕ ಗಾಂಧಿ ವಾದ್ರಾ ನಿನ್ನೆ ತಡರಾತ್ರಿ ಸ್ಥಳೀಯರ ಮನೆ ಮನೆಗೆ ತೆರಳಿ ಕುಶಲ ವಿಚಾರಿಸಿಕೊಂಡಿದ್ದಾರೆ.
ವಯನಾಡಿನಲ್ಲಿ ಇಂದು ಪ್ರಿಯಾಂಕ ವಾದ್ರಾ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇದಕ್ಕಾಗಿ ತಮ್ಮ ತಾಯಿ ಸೋನಿಯಾ ಗಾಂಧಿ ಜೊತೆ ಅವರು ನಿನ್ನೆ ರಾತ್ರಿಯೇ ವಯನಾಡಿಗೆ ಬಂದಿದ್ದಾರೆ. ಮೊದಲು ಮೈಸೂರು ವಿಮಾನ ನಿಲ್ದಾಣಕ್ಕೆ ಬಂದ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಬರಮಾಡಿಕೊಂಡರು.
ಮೈಸೂರು ಮಾರ್ಗವಾಗಿ ಅವರು ವಯನಾಡಿನತ್ತ ಪ್ರಯಾಣ ಬೆಳೆಸಿದ್ದಾರೆ. ವಯನಾಡಿಗೆ ಬಂದಿಳಿದ ಕೂಡಲೇ ತಡರಾತ್ರಿಯಲ್ಲೂ ಅಲ್ಲಿನ ಸ್ಥಳೀಯರ ಮನೆ ಮನೆಗೆ ತೆರಳಿ ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುತ್ತಾ ಸ್ಥಳೀಯ ನಿವಾಸಿಗಳ ವಿಶ್ವಾಸ ಪಡೆಯಲು ಪ್ರಯತ್ನ ನಡೆಸಿದ್ದಾರೆ.
ರಾಹುಲ್ ಗಾಂಧಿಯಿಂದ ತೆರವಾಗುತ್ತಿರುವ ಸ್ಥಾನಕ್ಕೆ ಈಗ ಸಹೋದರಿ ಪ್ರಿಯಾಂಕ ಸ್ಪರ್ಧಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಪ್ರಿಯಾಂಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಮಗಳಿಗೆ ಬೆಂಗಾವಲಾಗಿ ತಾಯಿ ಸೋನಿಯಾ ಕೂಡಾ ಆಗಮಿಸಿದ್ದಾರೆ. ಆದರೆ ರಾಹುಲ್ ಗಾಂಧಿ ಗೈರಾಗಿದ್ದಾರೆ.