ನವದೆಹಲಿ : ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಇಂಧನಗಳ ಮೇಲಿನ ತೆರಿಗೆ ಕಡಿತಗೊಳಿಸುವಂತೆ ಬಿಜೆಪಿಯೇತರ ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮುಖ್ಯಮಂತ್ರಿಗಳು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ಪ್ರಧಾನಿಗೆ ನಾಚಿಕೆಯಾಗಬೇಕು ಎಂದು ಕಟು ಶಬ್ದವನ್ನು ಪ್ರಯೋಗಿಸಿದ್ದಾರೆ. ಅಲ್ಲದೇ ತನ್ನ ರಾಜ್ಯದಲ್ಲಿ 2015 ರಿಂದ ಇಂಧನ ತೆರಿಗೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ರಾಜ್ಯಗಳನ್ನು ಕೇಳುವ ಬದಲು ಕೇಂದ್ರವು ತೆರಿಗೆಯನ್ನು ಏಕೆ ಕಡಿತಗೊಳಿಸಬಾರದು? ಕೇಂದ್ರವು ಕೇವಲ ತೆರಿಗೆಯನ್ನಷ್ಟೇ ಹೆಚ್ಚಿಸಿಲ್ಲ, ಸೆಸ್ ಕೂಡ ಸಂಗ್ರಹಿಸುತ್ತದೆ. ನಿಮಗೆ ಧೈರ್ಯವಿದ್ದರೆ, ಮೌಲ್ಯವರ್ಧಿತ ತೆರಿಗೆಗಳ ಬಗ್ಗೆ ವಿವರ ನೀಡಿ ಎಂದು ಸವಾಲು ಹಾಕಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿ, ಪ್ರಧಾನಿ ಮೋದಿಯವರು ಸಂಪೂರ್ಣ ಏಕಪಕ್ಷೀಯ ಮತ್ತು ದಾರಿತಪ್ಪಿಸುವ ಭಾಷಣ ಮಾಡಿದ್ದಾರೆ. ಅವರು ಹಂಚಿಕೊಂಡಿರುವ ಸಂಗತಿಗಳು ತಪ್ಪು.
ಕಳೆದ ಮೂರು ವರ್ಷಗಳಿಂದ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 1 ರೂಪಾಯಿ ಸಬ್ಸಿಡಿ ನೀಡುತ್ತಿದ್ದೇವೆ. ಇದಕ್ಕಾಗಿ 1,500 ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರಕ್ಕೆ 97,000 ಕೋಟಿ ರೂ. ಬಾಕಿ ಇದೆ. ಅರ್ಧದಷ್ಟು ಮೊತ್ತ ಪಡೆದ ಮರುದಿನ 3,000 ಕೋಟಿ ರೂ., ಪೆಟ್ರೋಲ್ ಮತ್ತು ಡೀಸೆಲ್ ಸಬ್ಸಿಡಿ ನೀಡುತ್ತೇವೆ. ಸಬ್ಸಿಡಿಯಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ನಾನು ನನ್ನ ಸರ್ಕಾರವನ್ನು ಹೇಗೆ ನಡೆಸುವುದು ಎಂದು ಪ್ರಶ್ನಿಸಿದ್ದಾರೆ.