ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪ್ರಧಾನಿ ಮೋದಿ ಯಾವಾಗ ಭಾಗಿಯಾಗುತ್ತಾರೆ, ಯಾವಾಗ ಪುಣ್ಯಸ್ನಾನ ಮಾಡುತ್ತಾರೆ ಎಂಬ ಮಾಹಿತಿ ಈಗ ಹೊರಬಿದ್ದಿದೆ.
ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಈಗಾಗಲೇ ಅನೇಕ ಗಣ್ಯಾತಿಗಣ್ಯರು, ಸಾಮಾನ್ಯರು, ಸಾಧು ಸಂತರು ಪುಣ್ಯಸ್ನಾನ ಮಾಡಿ ಹೋಗಿದ್ದಾರೆ. ಪ್ರಧಾನಿ ಮೋದಿ ಇನ್ನೂ ಬಂದಿಲ್ಲ. ಹೀಗಾಗಿ ಮೋದಿ ಯಾವಾಗ ಬರುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲಿದೆ. ಅದಕ್ಕೀಗ ಉತ್ತರ ಸಿಕ್ಕಿದೆ.
ಮೂಲಗಳ ಪ್ರಕಾರ ಫೆಬ್ರವರಿ 5 ಕ್ಕೆ ಪ್ರಧಾನಿ ಮೋದಿ ಪ್ರಯಾಗ್ ರಾಜ್ ಕುಂಭಮೇಳಕ್ಕೆ ಆಗಮಿಸಲಿದ್ದಾರೆ. ಅಂದು ಅವರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ ಎಂಬ ಮಾಹಿತಿಯಿದೆ. ಮೋದಿ ಮಾತ್ರವಲ್ಲದೆ, ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಗೃಹ ಸಚಿವ ಅಮಿತ್ ಶಾ ಕೂಡಾ ಪುಣ್ಯ ಸ್ನಾನ ಮಾಡುವ ದಿನಾಂಕ ನಿಗದಿಯಾಗಿದೆ.
ಗೃಹಸಚಿವ ಅಮಿತ್ ಶಾ ಜನವರಿ 27 ರಂದು, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಫೆಬ್ರವರಿ 1 ರಂದು, ರಾಷ್ಟ್ರಪತಿ ದ್ರೌಪದಿ ಮುರ್ಮು ಫೆಬ್ರವರಿ 10 ರಂದು ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡುವುದು ನಿಗದಿಯಾಗಿದೆ. ಕುಂಭಮೇಳಕ್ಕೆ ಗಣ್ಯಾತಿಗಣ್ಯರ ಆಗಮನ ಹಿನ್ನಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.