Select Your Language

Notifications

webdunia
webdunia
webdunia
webdunia

Kumbhmela: ಕುಂಭಮೇಳಕ್ಕೆ ಹೋಗುತ್ತೀರೆಂದರೆ ಈಗಾಗಲೇ ಹೋಗಿರುವ ಅನುಭವಿಯೊಬ್ಬರ ಮಾತು ಕೇಳಿ

Kumbhmela

Krishnaveni K

ಪ್ರಯಾಗ್ ರಾಜ್ , ಬುಧವಾರ, 15 ಜನವರಿ 2025 (11:49 IST)
ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಹೊರಟಿದ್ದರೆ ಅನುಭವಿಯೊಬ್ಬರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಈ ಕೆಲವು ವಿಚಾರಗಳು ನಿಮಗೆ ಉಪಯುಕ್ತವಾದೀತು.

ಕುಂಭಮೇಳದ ಅನುಭವ ಕಥನವನ್ನು ಶ್ರೀನಿಧಿ ಡಿಎಸ್ ಎಂಬವರು ಹಂಚಿಕೊಂಡಿದ್ದಾರೆ. ಇದು ಕುಂಭಮೇಳಕ್ಕೆ ಹೋಗುವವರಿಗೆ ಒಂದು ಕೈ ಪಿಡಿಯಾಗಬಹುದು. ಕುಂಭಮೇಳ ನಡೆಯುವ ಸ್ಥಳದ ವಾಸ್ತವಿಕ ಸ್ಥಿತಿಗತಿಯನ್ನು ಅವರು ಕಟ್ಟಿಕೊಟ್ಟಿದ್ದಾರೆ.

ಕುಂಭಮೇಳ ನಡೆಯುತ್ತಿರುವುದು ಗಂಗಾ ನದಿಯ ಬಯಲಿನಲ್ಲಿ. ವಿಸ್ತಾರವಾಗಿ ಹರಿಯುವ ಗಂಗಾ ನದಿ ಮಳೆಗಾಲ ಕಳೆದ ಮೇಲೆ ಇಳಿಯಲು ಆರಂಭವಾಗುತ್ತದೆ. ಈ ಜಾಗದಲ್ಲಿ ಕುಂಬಮೇಳಕ್ಕೆಂದೇ ವಿಶೇಷವಾಗಿ ನಿರ್ಮಾಣವಾಗಿರುವ ನಗರದಲ್ಲಿ ಕುಂಭಮೇಳ ನಡೆಯುತ್ತಿದೆ. ಮತ್ತೆ ಮಳೆಗಾಲ ಬಂದಾಗ ಈ ಕೃತಕ ನಗರಿ ನೀರಿನಲ್ಲಿ ಮುಳುಗಿ ಹೋಗಿರುತ್ತದೆ.

ಒಟ್ಟು ನಲವತ್ತು ಚದರ ಕಿ.ಮೀ.ರಗಳಷ್ಟು ಜಾಗದಲ್ಲಿ ಕೃತಕವಾಗಿ ನಗರ ನಿರ್ಮಿಸಲಾಗಿದೆ. ನಾವು ಒಂದೋ ಎರಡು ದಿನದ ಪ್ಲ್ಯಾನ್ ಮಾಡಿಕೊಂಡು ಹೋದರೆ ಇಡೀ ಕುಂಭಮೇಳ ನೋಡಲು ಸಾಧ್ಯವಾಗದು. ಪೂರ್ತಿಯಾಗಿ ನೋಡಲು ತಿಂಗಳಿದ್ದರೂ ಸಾಲದು. ಕಬ್ಬಿಣದ ಪಟ್ಟಿಗಳನ್ನು ಹೊಡೆದು ಮಾಡಿರೋ ರಸ್ತೆಯೇ ಸುಮಾರು 400 ಕಿ.ಮೀ. ಇದೆಯಂತೆ. ಹೀಗಾಗಿ ಮೊದಲೇ ಏನು ನೋಡಬೇಕು ಎಂದು ಪಟ್ಟಿ ಮಾಡಿಕೊಂಡು ಹೋಗಬೇಕಾಗುತ್ತದೆ. ಇನ್ನು ಇಲ್ಲೆಲ್ಲೂ ವಾಹನ ವ್ಯವಸ್ಥೆಯಿಲ್ಲ. ನಡೆದುಕೊಂಡೇ ಸಂಚಾರ ಮಾಡಬೇಕು.

ಗಂಗೆಯ ಘಾಟುಗಳ ಸುತ್ತಮುತ್ತ ಕಟ್ಟಿರುವ ಈ ಕುಂಭ ನಗರದಲ್ಲಿ ಈ ಬಾರಿ ಒಟ್ಟು 25 ಸೆಕ್ಟರ್ ಗಳಿವೆ. ಈ ಸೆಕ್ಟರ್ ಗಳು ಎಲ್ಲಿವೆ ಮತ್ತು ಯಾವ ಏರಿಯಾದಲ್ಲಿದೆ ಎಂದು ತಿಳಿದುಕೊಳ್ಳಬೇಕು.  ಈ ಸೆಕ್ಟರ್ ಗಳನ್ನು ಸಂಪರ್ಕ ಮಾಡಲು ನದಿಯಲ್ಲಿ 30 ಬ್ರಿಡ್ಜ್ ಗಳನ್ನು ನಿರ್ಮಿಸಲಾಗಿದೆ. ಇವುಗಳಿಗೆ ನಂಬರ್ ನೀಡಲಾಗಿದೆ. ಹೋಗುವುದಕ್ಕೆ ಬರುವುದಕ್ಕೆ ಬೇರೆ ಬೇರೆ ಬ್ರಿಡ್ಜ್ ಬಳಸಬೇಕಾಗುತ್ತದೆ. ಕಾಲ್ತುಳಿತ ಆಗಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆ.

ಈ ಬ್ರಿಡ್ಜ್ ನಲ್ಲಿ ಒಮ್ಮೆ ಎಡವಟ್ಟು ಮಾಡಿಕೊಂಡರೂ ಆಮೇಲೆ ಹತ್ತಾರು ಕಿ.ಮೀ. ಸುತ್ತಾಡಬೇಕಾದ ಪರಿಸ್ಥಿತಿಯಾಗಬಹುದು. ಪೊಲೀಸರು ನಿಮ್ಮನ್ನು ಹೋದ ಸೇತುವೆಯಲ್ಲೇ ವಾಪಸ್ ಬರಲು ಬಿಡಲ್ಲ. ನದಿಯ ಎರಡೂ ದಡದಲ್ಲಿ ಅಖಾಡಗಳು, ಬೇರೆ ಬೇರೆ ಸಂತಸ ಮಹಂತರ ದೇಗುಲಗಳು ಇರುತ್ತವೆ. ಅಖಂಡ ಭಜನೆ, ಹರಿಕತೆಗಳು ನಡೆಯುತ್ತಲೇ ಇರುತ್ತವೆ. ತೀರಾ ದಾರಿ ತಪ್ಪಿಕೊಂಡರೂ ದೊಡ್ಡ ಸಮಸ್ಯೆ ಆಗದು.

ಹೆಚ್ಚಿನ ಮಂದಿ ಕುಂಭಮೇಳಕ್ಕೆ ಬರುವುದು ನಾಗಾ ಸಾಧುಗಳನ್ನು ನೋಡಲು.ನಾಗ ಸಾಧುಗಳ ಸೆಕ್ಟರ್ ಎಲ್ಲಿದೆ ಎಂದು ಮೊದಲೇ ತಿಳಿದುಕೊಂಡು ಹೋಗುವುದು ಉತ್ತಮ. ನೀವು ಛಾಯಾಗ್ರಾಹಕರಾಗಿದ್ದರೆ, ಉತ್ತಮ ದೃಶ್ಯ ಕಣ್ತುಂಬಿಕೊಳ್ಳಬೇಕಾದರೆ ಕನಿಷ್ಠ 20-25 ಕಿ.ಮೀ. ನಡೆಯುವುದು ಅನಿವಾರ್ಯ.

ಹವಾಮಾನ ವಿಷಯಕ್ಕೆ ಬಂದರೆ ಫೆಬ್ರವರಿಯಾಗಿರುವುದರಿಂದ ಅತಿಯಾದ ಚಳಿಯಿರುತ್ತದೆ. ವೆದರ್ ಅಪ್ಲಿಕೇಷನ್ ನಲ್ಲಿರುವ ಹವಾಮಾನಕ್ಕೂ ಇಲ್ಲಿನ ಹವಾಮಾನಕ್ಕೂ ವ್ಯತ್ಯಾಸವಿರುತ್ತದೆ. ಗಂಗೆಯಿಂದ ಚಳಿಗಾಳಿ ಬೀಸುವ ಕಾರಣ ತಾಪಮಾನ 5 ಡಿಗ್ರಿಯವರೆಗೆ ಇರುತ್ತದೆ. ಹೀಗಾಗಿ ಸ್ವೆಟರ್, ಗ್ಲೌಸ್, ಟೋಪಿ ತೆಗೆದುಕೊಂಡು ಹೋಗುವುದು ಕಡ್ಡಾಯ. ಉತ್ತಮ ಗುಣಮಟ್ಟದ ಶೂಗಳು ಇರಬೇಕು.

ಊಟ ತಿಂಡಿಗೆ ಯಾವುದೇ ಸಮಸ್ಯೆಯಿರುವುದಿಲ್ಲ. ಎಲ್ಲಾ ಕಡೆ ಉಚಿತ ಅನ್ನದಾಸೋಹ ನಡೆಯುತ್ತಿರುತ್ತದೆ. ಸಂತರ ಟೆಂಟುಗಳ ಪಕ್ಕದಲ್ಲೇ ಅನ್ನದಾನ ಸರ್ವೇಸಾಮಾನ್ಯ. ಇದಲ್ಲದೆ ನೂರಾರು ಹೋಟೆಲ್ ಗಳು ತೆರೆದಿರುತ್ತದೆ. ಉತ್ತಮ ಜಾಗವನ್ನು ಹುಡುಕಿ ತಿಂಡಿ ತಿನ್ನಬಹುದು.

ಶಾಹಿ ಸ್ನಾನಕ್ಕೆ ಹೋಗುವಾಗ ಎಚ್ಚರಿಕೆ ಬೇಕು. ಸಾಕಷ್ಟು ಜನಸಂದಣಿಯಿರುತ್ತದೆ. ಮೈಮೇಲೆ ಬೆಲೆ ಬಾಳುವ ಒಡವೆ ಇತ್ಯಾದಿ ಹಾಕಿಕೊಂಡು ಹೋಗಬೇಡಿ. ತ್ರಿವೇಣಿ ಸಂಗಮ ಜಾಗದಲ್ಲಿ ಕೇವಲ ನಾಗಾಸಾಧುಗಳಿಗೆ ಮಾತ್ರ ಪ್ರವೇಶ. ನದಿ ದಂಡೆಯಲ್ಲಿ ಎಲ್ಲಿ ಜಾಗ ಸಿಗುತ್ತದೋ ಅಲ್ಲಿ ಸ್ನಾನ ಮಾಡುವುದು ಉತ್ತಮ.

ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಕಳೆದು ಹೋದವರ ಪತ್ತೆಗೆ ಅಲ್ಲಲ್ಲಿ ಕೇಂದ್ರಗಳಿವೆ. ಮೊಬೈಲ್ ನೆಟ್ ವರ್ಕ್ ಉತ್ತಮಗೊಳಿಸಲು ವ್ಯವಸ್ಥೆ ಮಾಡಲಾಗಿದೆ. ಉಚಿತ ವೈಫೈ ವ್ಯವಸ್ಥೆಯಿದೆ.

ವಸತಿ ವ್ಯವಸ್ಥೆ ಮಾಡುವುದಿದ್ದರೆ ಆದಷ್ಟೂ ತ್ರಿವೇಣಿ ಸಂಗಮದ ಆರರಿಂದ ಎಂಟು ಕಿ.ಮೀ. ಒಳಗೆ ಹೋಟೆಲ್/ಟೆಂಟು ಸಿಗುತ್ತದೆಯೇ ಎಂದು ನೋಡಿಕೊಳ್ಳಿ. ಏಕೆಂದರೆ ಅಷ್ಟೂ ದೂರವನ್ನು ನೀವು ನಡೆದೇ ಹೋಗಬೇಕು. ದೂರ ವಸತಿ ವ್ಯವಸ್ಥೆಯಾದರೆ ಕುಂಭಮೇಳಕ್ಕೆ ನಡೆದು ಸಾಗಲೇ ಒಂದು ದಿನ ಬೇಕು. ಇವಿಷ್ಟನ್ನೂ ಸಿದ್ಧತೆ ಮಾಡಿಕೊಂಡು ಕುಂಭಮೇಳಕ್ಕೆ ಪ್ರಯಾಣ ಹೊರಟರೆ ದಿಕ್ಕುಗಾಣದೇ ಓಡಾಡುವುದು ತಪ್ಪುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಪ್ರಧಾನ ಕಚೇರಿ ಹೊಸ ಕಟ್ಟಡಕ್ಕೆ: ಲಕ್ ಬದಲಾಗುತ್ತಾ