ಪ್ರಯಾಗ್‌ರಾಜ್: ವಿಶ್ವದ ಅತಿ ದೊಡ್ಡ ಧಾರ್ಮಿಕ ಉತ್ಸವವಾದ ಮಹಾಕುಂಭಮೇಳಕ್ಕೆ ಪ್ರಯಾಗ್‌ರಾಜ್‌ನಲ್ಲಿ ಸೋಮವಾರ ಅದ್ದೂರಿ ಚಾಲನೆ ಸಿಕ್ಕಿದೆ. ಮಕರ ಸಂಕ್ರಮಣ ದಿನವಾದ ಮಂಗಳವಾರ ಬೆಳಗ್ಗೆ ಕುಂಭಮೇಳದಲ್ಲಿ ಒಂದು ಕೋಟಿ ಭಕ್ತರು ಅಮೃತ ಸ್ನಾನ ಮಾಡಿ ಮಿಂದೆದ್ದಿದ್ದಾರೆ.
ಮುಂಜಾನೆ ಪಂಚಾಯತ್ ನಿರ್ವಾಣಿ ಅಖಾರದ ನಾಗಾ ಸಾಧುಗಳು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ನಂತರ ಇತರ ಅಖಾಡಗಳ ಋಷಿಗಳು ಪವಿತ್ರ ಸ್ನಾನ ಮಾಡಿದರು.
ಭಾರತ ಮತ್ತು ವಿದೇಶಗಳಿಂದ ಬಂದಿದ್ದ ಲಕ್ಷಾಂತರ ಯಾತ್ರಿಕರು ಚಳಿಯನ್ನು ಲೆಕ್ಕಿಸದೇ, ಅಮೃತ ಸ್ನಾನಕ್ಕಾಗಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ಸಂಗಮಕ್ಕೆ ಆಗಮಿಸಿದರು. ಬ್ರಾಹ್ಮಿ ಮುಹೂರ್ತದಂದು ಅಸಂಖ್ಯಾತ ಭಕ್ತರು ಪವಿತ್ರ ನೀರಿನಲ್ಲಿ ಮುಳುಗಿದರು.
ಪಂಚಾಯತ್ ನಿರ್ವಾಣಿ ಅಖಾಡದ ನಾಗಾ ಸಾಧುಗಳು ಈಟಿ, ತ್ರಿಶೂಲ ಮತ್ತು ಕತ್ತಿಗಳಿಂದ ಅಲಂಕರಿಸಲ್ಪಟ್ಟ ರಾಜ ರೂಪದಲ್ಲಿ ಅಮೃತ ಸ್ನಾನ ಮಾಡಿದರು. ಕುದುರೆಗಳು ಮತ್ತು ರಥಗಳ ಮೇಲೆ ಸವಾರಿ ಮಾಡಿ, ಸಾಧುಗಳು ಮತ್ತು ಸಂತರು ಭವ್ಯ ಮೆರವಣಿಗೆ ಮುನ್ನಡೆಸಿದರು.
ಪ್ರಯಾಗ್‌ರಾಜ್‌ನ ನಾಗವಾಸುಕಿ ದೇವಸ್ಥಾನ ಮತ್ತು ಸಂಗಮ್ ಪ್ರದೇಶದಲ್ಲಿ ಬೆಳಗಿನ ಜಾವದಿಂದಲೇ ಭಕ್ತರು ನೆರೆದಿದ್ದರು. ಸ್ನಾನ ಘಟ್ಟಗಳ 12 ಕಿ.ಮೀ. ವ್ಯಾಪ್ತಿಯಲ್ಲಿ ಹರ ಹರ ಮಹಾದೇವ್ ಮತ್ತು ಜೈ ಶ್ರೀ ರಾಮ್ ಘೋಷಣೆಗಳು ಮೊಳಗಿದವರು.