ನವದೆಹಲಿ : ವಿರೋಧ ಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ ಎಂದು ನಾಮಕರಣ ಮಾಡಿದ ನಿರ್ಧಾರವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಗಿರೀಶ್ ಭಾರದ್ವಾಜ್ ಎಂಬವರು ಈ ಅರ್ಜಿ ಸಲ್ಲಿಸಿದ್ದು, ಇಂಡಿಯಾ ಪದ ಬಳಕೆ ಮಾಡದಂತೆ ಸೂಚಿಸಲು ಮನವಿ ಮಾಡಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ನರುಲಾ ಅವರ ವಿಭಾಗೀಯ ಪೀಠ 26 ವಿರೋಧ ಪಕ್ಷಗಳು, ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿ ಅಕ್ಟೋಬರ್ 31 ರಂದು ವಿಚಾರಣೆ ಮುಂದೂಡಿತು.
ಅರ್ಜಿದಾರರ ಪರ ಹಿರಿಯ ವಕೀಲ ಅರುಣಾ ಶ್ಯಾಮ್ ವಾದ ಮಂಡಿಸಿ, ವಿಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಭಾರತದ ಹೆಸರನ್ನು ಬಳಸುತ್ತಿವೆ. ಇದು 2024 ರ ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಶಾಂತಿಯುತ, ಪಾರದರ್ಶಕ ಮತ್ತು ನ್ಯಾಯಯುತ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ನಾಗರಿಕರನ್ನು ಅನಗತ್ಯ ಹಿಂಸಾಚಾರಕ್ಕೆ ಒಡ್ಡಬಹುದು ಮತ್ತು ದೇಶದ ಕಾನೂನು ಮತ್ತು ಸುವ್ಯವಸ್ಥೆಯ ಹದಗೆಡಲು ಕಾರಣವಾಗಬಹುದು.