ನವದೆಹಲಿ: ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಅವರಂತಿಪುರ ಹಾಗೂ ಉಧಂಪುರದಲ್ಲಿರುವ ಆಸ್ಪತ್ರೆ, ಶಾಲೆ ಇತರ ಮೂಲ ಸೌಕರ್ಯಗಳ ಮೇಲೆ ದಾಳಿ ಮಾಡಿದೆ ಎಂದು ರಕ್ಷಣಾ ಸಚಿವಾಲಯ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಿಂಗ್ ಕಮಾಂಡರ್ ವ್ಯೂಮಿಕಾ ಸಿಂಗ್ ಮಾಹಿತಿ ನೀಡಿದ್ದಾರೆ.
ಭಾರತೀಯ ಸಶಸ್ತ್ರ ಪಡೆಗಳು ಹೆಚ್ಚಿನ ಕಾರ್ಯಾಚರಣೆಯ ಸನ್ನದ್ಧತೆಯಲ್ಲಿವೆ. ಎಲ್ಲಾ ಪ್ರತಿಕೂಲ ಕ್ರಮಗಳನ್ನು ಪರಿಣಾಮಕಾರಿಯಾಗಿ ಎದುರಿಸಲಾಗಿದೆ ಮತ್ತು ದಿಟ್ಟ ಉತ್ತರ ಸಹ ನೀಡಲಾಗಿದೆ. ಪಾಕಿಸ್ತಾನ ಮತ್ತೂ ದಾಳಿಗೆ ಪ್ರಯತ್ನಿಸಿದರೆ ನಮ್ಮ ಸೇನೆ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.
ಭಾರತ ನಡೆಸಿದ ವಾಯುದಾಳಿಯಲ್ಲಿ ಸಿಯಾಲ್‌ಕೋಟ್, ಪಸ್ರೂರ್ ರಾಡಾರ್ ಸೈಟ್, ರಹೀಮ್ ಯಾರ್ ಖಾನ್, ಮುರಿದ್, ರಫೀಕ್, ಚುನಿಯನ್, ಚಕ್ಲಾಲಾ, ಸುಕ್ಕೂರ್ ಮೊದಲಾದ ಪಾಕಿಸ್ತಾನ ವಾಯುನೆಲೆಗಳನ್ನು ಧ್ವಂಸಗೊಳಿಸಿದೆ. ಜೊತೆಗೆ ಭಾರತದ ಮೇಲೆ ಪದೇ ಪದೇ ದಾಳಿಗೆ ಯತ್ನಿಸುತ್ತಿದ್ದ ಡ್ರೋನ್ ಲಾಂಚ್‌ಪ್ಯಾಡನ್ನೇ ಉಡೀಸ್ ಮಾಡಿದೆ ಎಂದು ವಿವರಿಸಿದರು.
ಭಾರತೀಯ ಸೇನೆಯು ಪಾಕಿಸ್ತಾನದ ಡ್ರೋನ್‌ಗಳನ್ನು ಅಮೃತಸರದ ಖಾಸಾ ಕಂಟೋನ್ಮೆಂಟ್‌ನಲ್ಲಿ ಹೊಡೆದುರುಳಿಸಿದೆ. ಭಾರತದ ಸಾರ್ವಭೌಮತ್ವವನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಪಾಕಿಸ್ತಾನವು ಡ್ರೋನ್ ದಾಳಿಗಳ ಮೂಲಕ ಗಡಿಗಳಲ್ಲಿ ತೊಂದರೆ ಸೃಷ್ಟಿಸುತ್ತಿದೆ ಎಂದು ಭಾರತೀಯ ಸೇನೆ ಹೇಳಿದೆ.