ಇಸ್ಲಾಮಾಬಾದ್: ಪಹಲ್ಗಾಮ್‌ನಲ್ಲಿ ಎರಡು ವಾರಗಳ ಹಿಂದೆ ನಡೆದಿದ್ದ ಹಿಂದೂಗಳ ನರಮೇಧಕ್ಕೆ ಭಾರತ ಪ್ರತೀಕಾರದ ದಾಳಿ ನಡೆಸಿದೆ. ʻಆಪರೇಷನ್ ಸಿಂಧೂರʼ ಹೆಸರಿನಡಿ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ 9 ಉಗ್ರ ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ.
ಭಾರತ ಸೇನೆಯ ದಾಳಿಯಿಂದ ಪತರಗುಟ್ಟಿರುವ ಪಾಕ್ ಈಗ ಮತ್ತೆ ಬಾಲ ಬಿಚ್ಚುವ ಮಾತನ್ನಾಡುತ್ತಿದೆ. ಭಾರತದ ವಿರುದ್ಧ ದಾಳಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಸೇನೆಗೆ ಪರಮಾಧಿಕಾರ ನೀಡಿದ್ದಾರೆ ಎಂದು ವರದಿಯಾಗಿದೆ.
ಇಂದು ಮಧ್ಯಾಹ್ನದ ಬಳಿಕ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆ ಕರೆದ ಪ್ರಧಾನಿ ಶೆಹಬಾಜ್ ಶರೀಫ್ ಭಾರತದ ಪ್ರತೀಕಾರದ ದಾಳಿಯನ್ನ ಖಂಡಿಸಿದ್ದಾರೆ. ಅಪ್ರಚೋದಿತ ಮತ್ತು ಕಾನೂನುಬಾಹಿರ ಯುದ್ಧ ಕೃತ್ಯ ಎಂದು ಕರೆದಿದ್ದಾರೆ. ಅಲ್ಲದೇ ಭಾರತದ ವಿರುದ್ಧ ದಾಳಿಗೆ ಸೇನೆಗೆ ಅಧಿಕಾರ ನೀಡಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಮತ್ತೊಂದೆಡೆ ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಯೂಟರ್ನ್ ಹೊಡೆದಿದ್ದಾರೆ. ಭಾರತ ದಾಳಿ ಮಾಡಿದರೆ ಮಾತ್ರ ಪಾಕಿಸ್ತಾನ ಪ್ರತಿಕ್ರಿಯಿಸುತ್ತದೆ. ಕಳೆದ ಹದಿನೈದು ದಿನಗಳಿಂದ ನಾವು ಭಾರತದ ವಿರುದ್ಧ ಯಾವುದೇ ಬಗೆಯ ಕ್ರಮಕೈಗೊಳ್ಳುವುದಿಲ್ಲ ಎಂದು ಹೇಳುತ್ತಿದ್ದೇವೆ. ಆದರೆ ನಮ್ಮ ಮೇಲೆ ದಾಳಿ ನಡೆದರೆ, ನಾವು ಪ್ರತಿದಾಳಿ ಮಾಡುತ್ತೇವೆ. ಇನ್ನು ಒಂದು ವೇಳೆ ಭಾರತ ಹಿಂದೆ ಸರಿದರೆ ನಾವು ಸಹ ಖಂಡಿತವಾಗಿಯೂ ಈ ಉದ್ವಿಗ್ನತೆಯನ್ನು ಶಮನಗೊಳಿಸಲು ಸಿದ್ಧ ಎಂದು ಆಸಿಫ್ ಯೂಟರ್ನ್ ಹೊಡೆದಿದ್ದಾರೆ.
ಪಾಕಿಸ್ತಾನದ ಬಹವಾಲ್ಪುರದಲ್ಲಿ ನಡೆದ ಭಾರತದ ವೈಮಾನಿಕ ದಾಳಿಯಲ್ಲಿ ತನ್ನ ಕುಟುಂಬದ 10 ಸದಸ್ಯರು ಮತ್ತು ನಾಲ್ವರು ಸಹಚರರು ಸಾವನ್ನಪ್ಪಿದ್ದಾರೆ ಎಂದು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಹೇಳಿರುವುದಾಗಿ ವರದಿಯಾಗಿದೆ.