ನವದೆಹಲಿ: ಪಹಲ್ಗಾಮ್ ನರಹತ್ಯೆಗೆ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿದಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 100 ಉಗ್ರರ ಹತ್ಯೆಯಾಗಿದೆ ಎಂದು ಕೇಂದ್ರ ಸರ್ಕಾರ ಪ್ರತಿಪಕ್ಷಗಳಿಗೆ ಮಾಹಿತಿ ನೀಡಿದೆ.
ಸಂಸತ್ ಭವನದಲ್ಲಿ ಇಂದು ನಡೆದ ಸರ್ವಪಕ್ಷಗಳ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಮಾಹಿತಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅನುಪಸ್ಥಿತಿಯಲ್ಲಿ ರಾಜನಾಥ್ ಸಿಂಗ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಸೇರಿದಂತೆ ಬಹುತೇಕ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ಭಾರತೀಯ ಸೇನಾ ಕಾರ್ಯಾಚರಣೆಯಲ್ಲಿ ಎಷ್ಟು ಮಂದಿ ಉಗ್ರರು ಹತರಾಗಿದ್ದಾರೆ ಎಂದು ನಿಖರವಾಗಿ ಹೇಳುವುದು ಅಸಾಧ್ಯ. ಆದರೆ, ವಾಯುದಾಳಿಯಲ್ಲಿ ಪಾಕ್ ಪೋಷಿತ ಕನಿಷ್ಠ 100 ಉಗ್ರರ ಹತ್ಯೆಯಾಗಿದೆ. ನಾವು ಈ ಪರಿಸ್ಥಿತಿಯನ್ನು ಬೆಳೆಸಲು ಬಯಸುವುದಿಲ್ಲ. ಆದ್ರೆ ಪಾಕಿಸ್ತಾನ ಕಿತಾಪತಿ ಮಾಡಿದ್ರೆ ನಾವು ಸಹ ಹಿಂದೆ ಸರಿಯಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಗೃಹ ಸಚಿವ ಅಮಿತ್ ಶಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕೂಡ ಸಭೆಯಲ್ಲಿ ಹಾಜರಿದ್ದರು. ಅವರಲ್ಲದೆ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೂಡ ಹಾಜರಿದ್ದರು. ಇವರಲ್ಲದೆ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಕಾಂಗ್ರೆಸ್ ಪರವಾಗಿ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ, ಸರ್ಕಾರವು ವಿರೋಧ ಪಕ್ಷದ ನಾಯಕರಿಗೆ ಆಪರೇಷನ್ ಸಿಂಧೂರ್ ನಂತರದ ಪ್ರತೀಕಾರದ ಕ್ರಮ ಮತ್ತು ಭವಿಷ್ಯದ ಸಿದ್ಧತೆಗಳ ಬಗ್ಗೆ ಮಾಹಿತಿಯನ್ನು ನೀಡಿದೆ.