ನವದೆಹಲಿ: ಬಿಜೆಪಿಯು ಚುನಾವಣೆಯ ವೇಳೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಅವಕಾಶ ನೀಡುವ ಒಂದು ದೇಶ, ಒಂದು ಚುನಾವಣೆ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಗಿದೆ.
ಇಂದು ಲೋಕಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸಂವಿಧಾನ (ನೂರ ಇಪ್ಪತ್ತೊಂದನೇಯ ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆಯನ್ನು ಮಂಡಿಸಿದರು.
ಮಸೂದೆ ಮಂಡನೆಯ ಬೆನ್ನಲ್ಲೇ ಇಂಡಿಯಾ ಒಕ್ಕೂಟದ ಸದಸ್ಯರು ಭಾರೀ ವಿರೋಧ ವ್ಯಕ್ತಪಡಿಸಿದರು. ಸಂಸದ ಮನೀಶ್ ತಿವಾರಿ, ಕೇಂದ್ರ ಮತ್ತು ರಾಜ್ಯದ ಅವಧಿಯನ್ನು ಹೇಗೆ ಏಕ ಕಾಲದಲ್ಲಿ ಮಾಡಲು ಸಾಧ್ಯ? ಭಾರತ ಒಕ್ಕೂಟ ದೇಶ, ಕೇಂದ್ರೀಕರಣ ಮಾಡುವುದು ಸರಿಯಲ್ಲ. ಇದು ಸಂವಿಧಾನ ವಿರೋಧಿ ತಿದ್ದುಪಡಿ ಎಂದು ಕಿಡಿಕಾರಿದರು.
ಎಲ್ಲ ರಾಜ್ಯಗಳು ಬೇರೆ ಬೇರೆ ವೈವಿಧ್ಯತೆ ಹೊಂದಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಒಕ್ಕೂಟ ವ್ಯವಸ್ಥೆ ಮಾಡಿದರು. ನಾಲ್ಕು ರಾಜ್ಯಗಳ ಚುನಾವಣೆ ಒಟ್ಟಿಗೆ ಮಾಡಲು ಸಾಧ್ಯವಾಗಲಿಲ್ಲ. ಈಗ ಇಡೀ ದೇಶದಲ್ಲಿ ಒಟ್ಟಿಗೆ ಚುನಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದೀರಿ ಎಂದು ಎಂದು ಎಸ್‌ಪಿ ಸಂಸದ ಧರ್ಮೇಂದ್ರ ಯಾದವ್ ಲೇವಡಿ ಮಾಡಿದರು.
ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಾತನಾಡಿ, ಇದು ರಾಜ್ಯದ ಅಧಿಕಾರವನ್ನು ಕಿತ್ತುಕೊಳ್ಳುವುದಿಲ್ಲ. ಒಕ್ಕೂಟ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗುವುದಿಲ್ಲ. ಈ ಮಸೂದೆ ಆಕಸ್ಮಿಕವಾಗಿ ಬಂದಿಲ್ಲ. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿ ವಿಸ್ತೃತ ಚರ್ಚೆ ಮಾಡಿ ಶಿಫಾರಸ್ಸು ನೀಡಿದೆ ಎಂದು ತಿಳಿಸಿದರು.<>