ನವದೆಹಲಿ : ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ ತಮ್ಮ ನಿವಾಸ ಸಹಿತ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯ ಬಾಡಿಗೆ ಕಟ್ಟದೆ ಬಾಕಿ ಇರುವ ಮಾಹಿತಿ ಆರ್ಟಿಐ ಮೂಲಕ ಬಹಿರಂಗವಾಗಿದೆ.
ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಆರ್ಟಿಐಗೆ ನೀಡಿರುವ ಮಾಹಿತಿ ಪ್ರಕಾರ, ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯ ವಿರುದ್ಧ 12,69,902 ರೂ. ಬಾಡಿಗೆ ಬಾಕಿ ಇದೆ. ಕೊನೆಯ ಬಾರಿಗೆ 2012ರ ಡಿಸೆಂಬರ್ನಲ್ಲಿ ಬಾಡಿಗೆ ಪಾವತಿಸಿರುವ ಬಗ್ಗೆ ವರದಿಯಾಗಿದೆ.
ಕಾಂಗ್ರೆಸ್ ಕಚೇರಿ ಜೊತೆ 10 ಜನಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸಕ್ಕೆ 4,610 ರೂ. ಬಾಡಿಗೆ ಬಾಕಿ ಉಳಿದುಕೊಂಡಿದೆ. ಈ ನಿವಾಸದ ಬಾಡಿಗೆಯನ್ನು ಕೊನೆಯ ಬಾರಿ ಕೊನೆಯ 2020ರ ಸೆಪ್ಟೆಂಬರ್ನಲ್ಲಿ ಪಾವತಿಸಲಾಗಿದೆ.
ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಿಗೆ ವಾಸಿಸಲು ಅವಕಾಶ ನೀಡುವ ವಸತಿ ನಿಯಮಗಳ ಪ್ರಕಾರ ಪ್ರತಿಯೊಂದು ಪಕ್ಷಕ್ಕೂ ಸ್ವಂತ ಕಚೇರಿ ನಿರ್ಮಿಸಲು ಮೂರು ವರ್ಷಗಳ ಕಾಲಾವಕಾಶ ನೀಡಲಾಗಿದೆ. ಬಳಿಕ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕಾಗುತ್ತದೆ.
ಕಾಂಗ್ರೆಸ್ ಪಕ್ಷವು 2013ರ ವೇಳೆಗೆ ಅಕ್ಬರ್ ರಸ್ತೆಯ ಕಚೇರಿ ಮತ್ತು ಒಂದೆರಡು ಬಂಗಲೆಗಳನ್ನು ಖಾಲಿ ಮಾಡಬೇಕಾಗಿತ್ತು. ಆದರೆ ಖಾಲಿ ಮಾಡದಿದ್ದ ಪರಿಣಾಮ ಸರ್ಕಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಲೋಧಿ ರಸ್ತೆಯ ನಿವಾಸವನ್ನು ಒಂದು ತಿಂಗಳ ಅವಧಿಯಲ್ಲಿ ಖಾಲಿ ಮಾಡುವಂತೆ ನೋಟಿಸ್ ಕಳುಹಿಸಿತ್ತು ಎಂಬ ಮಾಹಿತಿ ಆರ್ಟಿಐನಲ್ಲಿ ತಿಳಿದುಬಂದಿದೆ.