ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋವಾದಲ್ಲಿ ಗಣಿಗಾರಿಕೆ ಪುನಾರಂಭ
ಪಣಜಿ: ಗೋವಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಣಿಗಾರಿಕೆಯನ್ನು ಮುಂದಿನ ಮೂರರಿಂದ ಆರು ತಿಂಗಳೊಳಗೆ ಪ್ರಾರಂಭಿಸುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಿಗಾರಿಕೆ ರಾಜ್ಯದ ಪ್ರಮುಖ ಆದಾಯದ ಮೂಲವಾಗಿತ್ತು. ಆದರೆ 2018ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ನಂತರ ಸ್ಥಗಿತಗೊಂಡಿತ್ತು. ಗಣಿಗಾರಿಕೆ ಉದ್ಯಮದಲ್ಲಿ ನಡೆದ ಭ್ರಷ್ಟಾಚಾರಗಳನ್ನು ತನಿಖೆ ನಡೆಸಿ ಪುನಾರಂಭಿಸಲು ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳುತ್ತೇವೆ. ಜೊತೆಗೆ ಮಾದರಿ ನಕ್ಷೆಯನ್ನು ರೂಪಿಸಲಾಗುವುದು. ಇದಕ್ಕೆ ಉನ್ನತ ಕಾನೂನು ತಜ್ಞರ ತಂಡವನ್ನು ರಚಿಸಿ ಸಮಾಲೋಚಿಸಲಾಗುವುದು ಎಂದು ಹೇಳಿದರು.
ಸುಮಾರು ಒಂದು ಅಥವಾ ಎರಡು ತಿಂಗಳುಗಳಲ್ಲಿ ಕಾನೂನಾತ್ಮಕವಾಗಿ ಸುಸ್ಥಿರ ಗಣಿಗಾರಿಕೆಯ ಮಾದರಿಯನ್ನು ಸಿದ್ಧಪಡಿಸಲು ಕಾಲವಕಾಶ ಬೇಕಾಗುತ್ತದೆ. ಅದಾದ ಬಳಿಕ ತಕ್ಷಣವೇ ಕಾರ್ಯಗತಗೊಳಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಈ ಎಲ್ಲಾ ಪ್ರಕ್ರಿಯೆಗೆ ಸರ್ಕಾರ ರಚನೆಯಾದ ಮೂರರಿಂದ ಆರು ತಿಂಗಳೊಳಗೆ ಗಣಿಗಾರಿಕೆ ಪ್ರಾರಂಭವಾಗುತ್ತದೆ ಎಂದು ಕಾಂಗ್ರೆಸ್‍ನ ಚುನಾವಣೆ ಪ್ರಣಾಳಿಕೆ ಬಿಡುಗಡೆಗೊಳಿಸಿ ತಿಳಿಸಿದರು.
ಇದೇ ತಿಂಗಳ ಫೆಬ್ರವರಿ 14 ರಂದು ಗೋವಾ ವಿಧಾನಸಭೆ ಚುನಾವಣೆ ನಡೆಯಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪ್ರಬಲ ಪೈಪೋಟಿ ನೀಡುತ್ತಿವೆ. ಮೊದಲ ಬಾರಿಗೆ ಆಪ್ ಹಾಗು ಸಮಾಜವಾದಿ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ.