ನವದೆಹಲಿ : ಲೋಕಸಭಾ ಸದಸ್ಯತ್ವ ರದ್ದಾದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮತ್ತೊಂದು ಶಾಕ್ ಎದುರಾಗಿದೆ. ಹೌದು. ತಿಂಗಳೊಳಗೆ ದೆಹಲಿಯಲ್ಲಿರುವ ತುಘಲಕ್ ಲಾನೆ ಬಂಗಲೆಯನ್ನು ತೊರೆಯುವಂತೆ ಲೋಕಸಭಾ ವಸತಿ ಸಮಿತಿ ನೋಟಿಸ್ ನೀಡಿದೆ.
ಸಂಸದರಿಗೆ ನೀಡಲಾಗುವ ವಸತಿ ಗೃಹದ ಸೌಲಭ್ಯವನ್ನು ಹಿಂಪಡೆಯಲು ನಿರ್ಧರಿಸಿ ದಿಲ್ಲಿಯ ಬಂಗಲೆಯನ್ನು ಒಂದು ತಿಂಗಳೊಳಗೆ ತೆರವುಗೊಳಿಸುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ. ಆದರೆ ಇಂತಹ ಯಾವುದೇ ನೋಟಿಸ್ ಬಂದಿಲ್ಲ ಎಂದು ರಾಹುಲ್ ಗಾಂಧಿ ತಂಡ ತಿಳಿಸಿದೆ.
ಮಾನನಷ್ಟ ಪ್ರಕರಣ ಸಂಬಂಧ ಸೂರತ್ ಕೋರ್ಟ್ 2 ವರ್ಷ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಲೋಕಸಭೆ ಸಚಿವಾಲಯದ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿತ್ತು.
2019ರ ಲೋಕಸಭಾ ಚುನಾವಣೆಯ ವೇಳೆ ನರೇಂದ್ರ ಮೋದಿಯವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಗೆ ಸೂರತ್ ಕೋರ್ಟ್ ಗುರುವಾರ ಬೆಳಗ್ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಶಿಕ್ಷೆ ವಿಧಿಸಿದ ಬೆನ್ನಲ್ಲೇ ರಾಹುಲ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು ಸೂರತ್ ಕೋರ್ಟ್ 30 ದಿನಗಳ ಜಾಮೀನು ಮಂಜೂರು ಮಾಡಿತ್ತು.
ಕಳೆದ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಓರ್ವ ಕಳ್ಳ ಎಂದು ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.